ತಲೆಕೂದಲು ವಿಪರೀತ ಉದುರುತ್ತಿದೆಯೇ. ಹೀಗೇ ಆದರೆ ನಿಮ್ಮ ತಲೆ ಬೋಳಾಗುತ್ತದೆ ಎಂಬ ಭೀತಿ ನಿಮ್ಮನ್ನು ಕಾಡುತ್ತಿದೆಯೇ. ಹಾಗಿದ್ದರೆ ಈ ಮನೆಮದ್ದನ್ನು ಪ್ರಯತ್ನಿಸಿ ನೋಡಿ.
ತಲೆಕೂದಲು ಉದುರುವುದನ್ನು ತಡೆಯುವ ಈ ಎಣ್ಣೆಯನ್ನು ನೀವು ಮನೆಯಲ್ಲೇ ತಯಾರಿಸಬಹುದು. ಇದಕ್ಕೆ ನೀವು ಮಾಡಬೇಕಾದ್ದಿಷ್ಟೆ.
ಮೊದಲಿಗೆ ಅರ್ಧ ಲೀಟರ್ ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ. ಇದಕ್ಕೆ ಎರಡು ಚಮಚ ಮೆಂತೆ ಕಾಳನ್ನು ಹುರಿದು ಹಾಕಿ. ಮೆಂತೆ ಕಾಳು ಕಪ್ಪಾಗುತ್ತಲೇ ಎಣ್ಣೆಯೂ ಕಪ್ಪಾಗುತ್ತದೆ. ಇದನ್ನು ತಣ್ಣಗಾಗಲು ಬಿಡಿ.
ಗಟ್ಟಿ ಮುಚ್ಚಳವಿರುವ ಬಾಟಲಿಯಲ್ಲಿ ಇದನ್ನು ಸಂಗ್ರಹಿಸಿಡಿ. ವಾರಕ್ಕೆ ಎರಡು ಬಾರಿ ತಲೆಗೆ ಸ್ನಾನ ಮಾಡುವ ಅರ್ಧ ಗಂಟೆ ಮುನ್ನ ಇದನ್ನು ಹಚ್ಚಿ. ಚೆನ್ನಾಗಿ ಮಸಾಜ್ ಮಾಡಿ. ಮೈಲ್ಡ್ ಶ್ಯಾಂಪೂ ಬಳಸಿ ಸ್ನಾನ ಮಾಡಿ. ಸಾಸಿವೆ ಎಣ್ಣೆ ಬಿಸಿ ಮಾಡಿದ ಪರಿಣಾಮ ಅದರ ವಾಸನೆಯನ್ನೂ ಕಳೆದುಕೊಂಡಿರುತ್ತದೆ.
ಹಿಂದಿನ ರಾತ್ರಿ ತಲೆಗೆ ಹಚ್ಚಿ ಮಲಗಿ, ಮರುದಿನ ಬೆಳಗ್ಗೆದ್ದು ಸ್ನಾನ ಮಾಡಿದರೆ ಇನ್ನೂ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು. ತಲೆದಿಂಬಿನ ಮೇಲೆ ಎಣ್ಣೆಯಾಗುವುದನ್ನು ತಡೆಯಲು ದಿಂಬಿಗೆ ಪ್ಲಾಸ್ಟಿಕ್ ಕವರ್ ಮಾಡಿ.