ಇದು ವಿಶ್ವದ ಅತ್ಯಂತ ವಿಶಿಷ್ಟ ಸ್ಥಳಗಳಲ್ಲೊಂದು. ಪ್ರಪಂಚದಲ್ಲೇ ಅತ್ಯಂತ ಶೀತವಿರುವ ಪ್ರದೇಶ ಇದು. ಇಲ್ಲಿ ತಡೆಯಲಾರದಷ್ಟು ವಿಪರೀತ ಚಳಿ. ಮೈನಸ್ 50 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆ ತಾಪಮಾನವಿರೋ ನಗರ ಇರೋದು ರಷ್ಯಾದ ಸೈಬೀರಿಯಾ ಬಳಿ. ಇದನ್ನು ಯಾಕುಟ್ಸ್ಕ್ ಎಂದು ಕರೆಯಲಾಗುತ್ತದೆ. ಈ ನಗರವು ರಷ್ಯಾದ ರಾಜಧಾನಿ ಮಾಸ್ಕೋದಿಂದ ಪೂರ್ವಕ್ಕೆ 5000 ಕಿಲೋಮೀಟರ್ ದೂರದಲ್ಲಿದೆ.
ಯಾಕುಟ್ಸ್ಕ್ನಲ್ಲಿ ಜನಜೀವನ ನಿಜಕ್ಕೂ ದುಸ್ತರ. ದಿನವಿಡೀ ಬೀಸುವ ತಂಪು ಗಾಳಿ ಹಾಗೂ ಕ್ಷಣಾರ್ಧದಲ್ಲಿ ತಾಪಮಾನ ಕುಸಿತದಿಂದ ಜನರು ಅಕ್ಷರಶಃ ನಡುಗಿ ಹೋಗ್ತಾರೆ. ಬೇಸಿಗೆಯಲ್ಲಿ ಇಲ್ಲಿನ ತಾಪಮಾನವು 5 ರಿಂದ 10 ಡಿಗ್ರಿಗಳ ನಡುವೆ ಇರುತ್ತದೆ. ಚಳಿಗಾಲದಲ್ಲಿ ತಾಪಮಾನ 0 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುತ್ತದೆ. ವಿಪರೀತ ಚಳಿಯಿದ್ದಾಗ -38 ಡಿಗ್ರಿವರೆಗೆ ತಲುಪುತ್ತದೆ. ಕೆಲವೊಮ್ಮೆ ಇದು -50 ಡಿಗ್ರಿಗೆ ಇಳಿಯುವುದೂ ಉಂಟು. ಮೈತುಂಬಾ ಉಣ್ಣೆ ಬಟ್ಟೆಯನ್ನು ಧರಿಸದೇ ಮನೆಯಿಂದ ಹೊರಬಿದ್ದರೆ ಇಲ್ಲಿ ಫ್ರೀಝ್ ಆಗುವುದರಲ್ಲಿ ಅನುಮಾನವೇ ಇಲ್ಲ.
ಈ ಹವಾಮಾನದಿಂದಾಗಿ ಯಾಕುಟ್ಸ್ಕ್ ಅನ್ನು ಅಪಾಯಕಾರಿ ನಗರ ಎಂದೂ ಕರೆಯುತ್ತಾರೆ. ಇಲ್ಲಿನ ರಸ್ತೆಗಳು ಹಲವು ದಿನಗಳವರೆಗೆ ಹಿಮದಿಂದ ಆವೃತವಾಗಿರುತ್ತವೆ. ಇಲ್ಲಿ ಸಾಮಾನ್ಯ ಜೀವನ ನಡೆಸುವುದು ಸವಾಲಾಗಿದೆ. ಜನರಿಗೆ ಆಹಾರ ಸಿಗುವುದು ತುಂಬಾ ಕಷ್ಟಕರ. ಇತ್ತೀಚಿನ ದಿನಗಳಲ್ಲಿ ಪ್ಯಾಕೇಜ್ ಸರಕುಗಳು ಲಭ್ಯವಾಗುತ್ತಿದ್ದು, ಜನರು ಕೊಂಚ ನಿರಾಳರಾಗಿದ್ದಾರೆ. ಆದರೂ ಪ್ರಪಂಚದ ಅತ್ಯಂತ ಶೀತಮಯ ಪ್ರದೇಶದಲ್ಲಿ ಬದುಕುವುದು ನಿಜಕ್ಕೂ ಸವಾಲೇ ಸರಿ.