ಗರ್ಭಿಣಿಯಾಗಿರುವಾಗ 9 ನೇ ತಿಂಗಳಿನ ಪ್ರಯಾಣ ಸುಲಭವಂತೂ ಅಲ್ಲವೇ ಅಲ್ಲ. ತನ್ನೊಳಗೆ ಇನ್ನೊಂದು ಜೀವವನ್ನು ಹೊತ್ತು ತನ್ನ ಜೀವವನ್ನೇ ಪಣಕ್ಕಿಡುವ ಈ ವಿಧಾನವು ಯಾವುದೇ ಸಾಹಸಕ್ಕೂ ಕಡಿಮೆ ಇಲ್ಲ. ಹೀಗಾಗಿ ಗರ್ಭಿಣಿಯರ ದೇಹವನ್ನು ದೇಗುಲ ಎಂದು ಕರೆದರೂ ಸಹ ತಪ್ಪಾಗಲಾರದು .
ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ವೈದ್ಯರು ಹಾಗೂ ಹಿರಿಯರು ಅಗಾಧವಾದ ಪೋಷಕಾಂಶವುಳ್ಳ ಆಹಾರವನ್ನೇ ಸೇವಿಸಲು ಹೇಳ್ತಾರೆ. ಅದರಲ್ಲೂ ಹೆಚ್ಚಾಗಿ ಕೇಸರಿಯನ್ನು ಸೇವಿಸುವಂತೆ ಹೇಳಲಾಗುತ್ತೆ. ಆಯುರ್ವೇದದಲ್ಲೂ ಕೇಸರಿಗೆ ತುಂಬಾನೇ ಮಹತ್ವವಿದೆ. ಹಾಗಾದರೆ ಸಣ್ಣ ಎಸಳು ಕೇಸರಿಯಿಂದ ಗರ್ಭಿಣಿಯ ದೇಹಕ್ಕೆ ಯಾವೆಲ್ಲ ಉಪಯೋಗ ಇದೆ ಅನ್ನೋದನ್ನ ನೋಡೋಣ.
ಮೂಡ್ ಸ್ವಿಂಗ್ಸ್ ಸರಿದೂಗಿಸುತ್ತೆ :
ಗರ್ಭಾವಸ್ಥೆಯಲ್ಲಿ ಹಾರ್ಮೋನ್ಗಳ ಏರುಪೇರಿನಿಂದಾಗಿ ಮಹಿಳೆಯರಿಗೆ ಮೂಡ್ಸ್ವಿಂಗ್ಸ್ ಕಾಡುತ್ತದೆ. ಇದರಿಂದ ಗರ್ಭಿಣಿಯರು ಸಣ್ಣ ಸಣ್ಣದಕ್ಕೂ ಸಿಡುಕೋದು, ದುಃಖಿತರಾಗೋದು ಹೆಚ್ಚು. ಆದರೆ ಕೇಸರಿಗೆ ನಿಮ್ಮ ಈ ಮೂಡ್ ಸ್ವಿಂಗ್ಸ್ನ್ನು ಹತೋಟಿಗೆ ತರುವ ಸಾಮರ್ಥ್ಯ ಇದೆ. ಇದು ನಿಮ್ಮ ದೇಹದಲ್ಲಿ ರಕ್ತದ ಪರಿಚಲನೆಯನ್ನು ಸರಾಗಗೊಳಿಸುತ್ತದೆ. ಇದರಿಂದ ಭಾವನಾತ್ಮಕವಾಗಿಯೂ ನೀವು ಸದೃಢರಾಗಿರಲು ಸಾಧ್ಯ .
ಉತ್ತಮ ನಿದ್ರೆ :
ಗರ್ಭಿಣಿಯಾಗಿದ್ದಾಗ ನಿದ್ದೆ ಬರೋದು ತುಂಬಾನೇ ಕಡಿಮೆ. ಯಾವ ಮಗ್ಗುಲಿನಲ್ಲಿ ಮಲಗಿದರೂ ಸರಿಯೆನಿಸೋದೇ ಇಲ್ಲ. ಇಂತಹ ಸಂದರ್ಭದಲ್ಲಿ ನೀವು ರಾತ್ರಿ ವೇಳೆ ಒಂದು ಲೋಟ ಹಾಲಿಗೆ ಕೇಸರಿ ಹಾಕಿ ಕುಡಿದಲ್ಲಿ ಉತ್ತಮ ನಿದ್ರೆ ನಿಮ್ಮದಾಗಲಿದೆ.
ಕ್ರ್ಯಾಂಪ್ನಿಂದ ಮುಕ್ತಿ :
ಹಾರ್ಮೋನ್ ಬದಲಾವಣೆಯಿಂದ ಗರ್ಭಿಣಿಯರಿಗೆ ಕ್ರ್ಯಾಂಪ್ ಅತಿಯಾಗಿ ಇರುತ್ತದೆ. ಕೇಸರಿ ಸೇವನೆಯಿಂದ ನೀವು ಈ ಸಂಕಷ್ಟದಿಂದ ಮುಕ್ತಿ ಹೊಂದಬಹುದಾಗಿದೆ.
ಹೃದಯದ ಆರೋಗ್ಯಕ್ಕೆ ಸಹಕಾರಿ :
ಗರ್ಭಿಣಿಯಾಗಿದ್ದಾಗ ಏನಾದರೂ ತಿನ್ನಬೇಕೆಂಬ ಬಯಕೆ ಹೆಚ್ಚಿರುತ್ತದೆ. ಇದರಿಂದ ನಿಮ್ಮ ದೇಹಕ್ಕೆ ಹೆಚ್ಚಿನ ಕ್ಯಾಲೋರಿ ಸೇರುತ್ತದೆ. ಹೀಗಾಗಿ ದೇಹದಲ್ಲಿ ಕೊಬ್ಬಿನ ಅಂಶ ಕೂಡ ಹೆಚ್ಚಿರುತ್ತದೆ. ಆದರೆ ಕೇಸರಿಯು ಕೊಬ್ಬನ್ನು ಕರಗಿಸುವುದರಲ್ಲಿ ಸಹಕಾರಿ. ಅಲ್ಲದೇ ದೇಹದಲ್ಲಿ ಆಮ್ಲಜನಕದ ಮಟ್ಟವನ್ನು ಹೆಚ್ಚಿಸುತ್ತದೆ.