ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ತನಿಖೆ ನಡೆಸಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಒಪ್ಪಿಗೆ ಸೂಚಿಸಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ತನಿಖೆಗೆ ರಾಜ್ಯಪಾಲರು ಸಮ್ಮತಿ ಸೂಚಿಸಿದ ಬಳಿಕ ಆಡಳಿತ ಹಾಗೂ ವಿರೋಧ ಪಕ್ಷಗಳ ಆರೋಪ – ಪ್ರತ್ಯಾರೋಪ ಜೋರಾಗಿದೆ.
ಆದರೆ ಮುಖ್ಯಮಂತ್ರಿ ವಿರುದ್ಧ ರಾಜ್ಯಪಾಲರು ತನಿಖೆಗೆ ಆದೇಶಿಸಿರುವುದು ಇದೇ ಮೊದಲ ಪ್ರಕರಣವೇನಲ್ಲ. ಈ ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಅಂದಿನ ರಾಜ್ಯಪಾಲ ಹಂಸರಾಜ್ ಭಾರದ್ವಾಜ್, ಯಡಿಯೂರಪ್ಪ ವಿರುದ್ಧ ಕ್ರಿಮಿನಲ್ ಪ್ರಕರಣದ ದಾಖಲಿಸಲು ಅನುಮತಿ ನೀಡಿದ್ದರು.
ಇದಾದ ಬಳಿಕ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿರುವುದರಿಂದ ಇದು ರಾಜ್ಯದಲ್ಲಿ ಎರಡನೇ ಪ್ರಕರಣವಾಗಿದೆ. ಅಂದು ಯಡಿಯೂರಪ್ಪನವರ ವಿರುದ್ಧ ರಾಜ್ಯಪಾಲರು ಪ್ರಕರಣ ದಾಖಲಿಸಲು ಅನುಮತಿ ಕೊಟ್ಟ ಸಂದರ್ಭದಲ್ಲಿ ಬಿಜೆಪಿ ರಾಜ್ಯ ವ್ಯಾಪಿ ಪ್ರತಿಭಟನೆ ನಡೆಸಿದ್ದು, ಇದೀಗ ಸಿದ್ದರಾಮಯ್ಯನವರ ವಿರುದ್ಧ ತನಿಖೆಗೆ ರಾಜ್ಯಪಾಲರು ಸಮ್ಮತಿ ನೀಡಿದ ಬಳಿಕ ಕಾಂಗ್ರೆಸ್ ರಾಜ್ಯ ವ್ಯಾಪಿ ಹೋರಾಟ ನಡೆಸಲು ಮುಂದಾಗಿದೆ.