ಕಾಲ ಬದಲಾದಂತೆ ಜೀವನ ಶೈಲಿಯೂ ಬದಲಾಗಿದೆ. ಅವಿಭಕ್ತ ಕುಟುಂಬಗಳಿಗೂ, ವಿಭಕ್ತ ಕುಟುಂಬಗಳಿಗೂ ಸಾಕಷ್ಟು ವ್ಯತ್ಯಾಸಗಳನ್ನು ಕಾಣಬಹುದಾಗಿದೆ.
ಹಿಂದೆಲ್ಲಾ ಮನೆಯಲ್ಲಿದ್ದ ಸದಸ್ಯರು ಕೆಲಸ, ಹಂಚಿಕೊಂಡು ಮಾಡುತ್ತಿದ್ದರು. ಈಗ ಇರುವ ಸದಸ್ಯರಲ್ಲಿಯೇ ಕೆಲಸದ ಹಂಚಿಕೆಯಾಗುತ್ತದೆ. ಹೊರಗೆ ಕೆಲಸ ಮಾಡಿ ದಣಿದು ಬಂದ ದೇಹಕ್ಕೆ ವಿಶ್ರಾಂತಿ ಬೇಕೆನಿಸಿದರೂ, ಮನೆಯಲ್ಲಿ ಗಂಡ, ಹೆಂಡತಿ, ಮಕ್ಕಳು ಮಾತ್ರ ಇರುವ ಕಾರಣ ಅವರವರ ಕೆಲಸಗಳನ್ನು ಅವರೇ ಮಾಡಿಕೊಳ್ಳುವ ಅನಿವಾರ್ಯತೆ ಸಹಜವಾಗಿರುತ್ತದೆ.
ಈಗಿನ ದುಬಾರಿ ಕಾಲದಲ್ಲಿ ಗಂಡ ಒಬ್ಬನೇ ದುಡಿದರೆ ಸಾಕಾಗಲ್ಲ. ಹೆಣ್ಣುಮಕ್ಕಳು ಕೂಡ ಕೆಲಸಕ್ಕೆ ಹೋಗಿ ಸಂಸಾರದ ಜವಾಬ್ದಾರಿ ಹೊರುತ್ತಾರೆ. ಹೊರಗೆ ದುಡಿದು ಬಂದ ಹೆಚ್ಚಿನ ಹೆಣ್ಣುಮಕ್ಕಳು ಮನೆ ಕೆಲಸವನ್ನೂ ಮಾಡಬೇಕು. ಆದರೆ, ಬಹುತೇಕ ಗಂಡಸರು ಮನೆ ಕೆಲಸಗಳಿಂದ ದೂರವೇ ಉಳಿಯುತ್ತಾರೆ. ಇದರ ಬದಲಿಗೆ ನಿಮ್ಮ ಶೈಲಿಯನ್ನು ಬದಲಿಸಿಕೊಳ್ಳಿ.
ಮನೆ ಕೆಲಸದಲ್ಲಿ ನಿಮ್ಮ ಸಂಗಾತಿಗೂ ನೆರವಾಗಿ. ಸಣ್ಣ ಸಣ್ಣ ಕೆಲಸಗಳನ್ನು ಮಾಡಿಕೊಡುವ ಮೂಲಕ ನಿನ್ನೊಂದಿಗೆ ನಾನಿದ್ದೇನೆ ಎಂಬ ಭಾವನೆ ಮೂಡಿಸಿ. ಪತ್ನಿ ಏನಾದರೂ ಹೇಳುವಾಗ ತಾತ್ಸಾರ ಮಾಡದೇ ಹೇಳುವುದನ್ನು ಕೇಳಿಸಿಕೊಳ್ಳಿ. ಸಾಧ್ಯವಾದರೆ, ಏನಾದರೂ ಸಲಹೆ ಸೂಚನೆಗಳಿದ್ದರೆ ಕೊಡಿ. ಅಲ್ಲದೇ ಪತ್ನಿ ಕೆಲಸ ಮಾಡುವಾಗ ಏನಾದರೂ ಸಹಾಯ ಮಾಡಲೇ ಎಂದು ಕೇಳಿ. ನೀವು ಕೆಲಸ ಮಾಡದಿದ್ದರೂ ಪರವಾಗಿಲ್ಲ, ಈ ಮಾತಿನಿಂದ ಅವರಿಗೆ ನೀವು ಕೆಲಸ ಮಾಡಿಕೊಟ್ಟು ಸಹಾಯ ಮಾಡಿದಷ್ಟೇ ಖುಷಿ ಸಿಗುತ್ತದೆ.
ಪ್ರತಿ ವಿಷಯಕ್ಕೆ ಸಿಟ್ಟು ಮಾಡಿಕೊಳ್ಳದೇ ಅವರ ಅಭಿಪ್ರಾಯ ಕೇಳಿ, ನಿಮ್ಮ ಅನಿಸಿಕೆಯನ್ನು ತಿಳಿಸಿ. ಮುಚ್ಚಿಡುವುದಕ್ಕಿಂತ ಸಂಗಾತಿಯೊಂದಿಗೆ ಅಭಿಪ್ರಾಯ ಹಂಚಿಕೊಳ್ಳುವುದು ಒಳ್ಳೆಯದು. ಕೆಲಸದ ಸ್ಥಳದಲ್ಲಿನ ಸಿಟ್ಟನ್ನು ಮನೆಯವರೆಗೂ ತರಬೇಡಿ. ಮನೆಯೊಳಗೆ ನೀವು ನೀವಾಗಿದ್ದರೆ ಕುಟುಂಬದವರಿಗೂ ಹಿತವೆನಿಸುತ್ತದೆ. ಸಿಟ್ಟು ಮಾಡಿಕೊಂಡರೆ ಮೌನವೇ ಆವರಿಸುತ್ತದೆ. ಮನೆಯವರೊಂದಿಗೆ ಸಾಧ್ಯವಾದಷ್ಟು ಹೆಚ್ಚಿನ ಸಮಯ ಕಳೆಯಿರಿ.