ಅಮ್ಮನಾಗೋದು ಪ್ರತಿಯೊಬ್ಬ ಮಹಿಳೆಯ ಕನಸು. ಈಗಿನ ಜೀವನ ಶೈಲಿಯಲ್ಲಿ ಮಕ್ಕಳನ್ನು ಪಡೆಯೋದು ಸುಲಭದ ಮಾತಲ್ಲ. ಗರ್ಭಧಾರಣೆ, ಹೆರಿಗೆ ಹಾಗೂ ನಂತ್ರದ ದಿನಗಳಲ್ಲಿ ತಾಯಿಯಾದವಳು ಸಾಕಷ್ಟು ನೋವು, ಸಂತೋಷ, ಬದಲಾವಣೆಗಳನ್ನು ಎದುರಿಸಬೇಕಾಗುತ್ತದೆ.
ಸಾಮಾನ್ಯವಾಗಿ ಆರ್ಥಿಕ ಜೀವನವನ್ನು ಗಮನದಲ್ಲಿಟ್ಟುಕೊಂಡು ಮಗುವಿನ ಪ್ಲಾನ್ ಮಾಡ್ತಾರೆ. ಆದ್ರೆ ಮಗು ಹೆರಲು ಕೆಲವೊಂದು ಯೋಗ್ಯ ವಯಸ್ಸಿದೆ. ಆ ವಯಸ್ಸಿನಲ್ಲಿ ಗರ್ಭಧಾರಣೆಯಿಂದ ಹಿಡಿದು ಹೆರಿಗೆ, ಮಗುವಿನ ಆರೋಗ್ಯ ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ ಎಂದು ವೈದ್ಯರು ಹೇಳ್ತಾರೆ.
20 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿ ಗರ್ಭಧಾರಣೆ ಯೋಗ್ಯವಲ್ಲ. 15-20 ವರ್ಷದೊಳಗಿನ ಹುಡುಗಿಯರು ಗರ್ಭಧಾರಣೆ ವೇಳೆ ತೀವ್ರ ತೊಂದರೆ ಎದುರಿಸುತ್ತಾರೆ. ಹೆರಿಗೆ ವೇಳೆ ಸಾವನ್ನಪ್ಪುವ ಅಪಾಯ ಕೂಡ ಹೆಚ್ಚಿರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
25 ವರ್ಷಕ್ಕೆ ಮದುವೆಯಾದ್ರೆ ಮದುವೆಯಾದ ಕೆಲವೇ ದಿನಗಳಲ್ಲಿ ನೀವು ಗರ್ಭಧಾರಣೆಗೆ ಪ್ಲಾನ್ ಮಾಡಬಹುದು. ಮಕ್ಕಳನ್ನು ಪಡೆಯಲು 25 ಅತ್ಯುತ್ತಮ ಸಮಯ. ಈ ವಯಸ್ಸಿನಲ್ಲಿ ವೀರ್ಯ ತಾಜಾ ಹಾಗೂ ಹೊಂದಾಣಿಕೆಯುಕ್ತವಾಗಿರುವುದ್ರಿಂದ ಬೇಗ ಗರ್ಭಧಾರಣೆ ಸಾಧ್ಯವಾಗುತ್ತದೆ.
ಬಹುತೇಕ ದಂಪತಿ 30ನೇ ವರ್ಷದಲ್ಲಿ ಮಗು ಪಡೆಯಲು ಇಷ್ಟಪಡ್ತಾರೆ. ಇದು ಫರ್ಫೆಕ್ಟ್ ಸಮಯ ಎಂದುಕೊಳ್ಳುತ್ತಾರೆ. ಆದ್ರೆ ಈ ವಯಸ್ಸಿನಲ್ಲಿ ಮಕ್ಕಳನ್ನು ಪಡೆಯುವ ಮಹಿಳೆಯರ ಫಲವತ್ತತೆ ಮಟ್ಟ ಇಳಿಯುತ್ತ ಬರುತ್ತದೆ. ಜೀವನಶೈಲಿ ಕೂಡ ಮಹಿಳೆ ಹಾಗೂ ಪುರುಷರ ಮೇಲೆ ಪ್ರಭಾವ ಬೀರುತ್ತದೆ.
30-35 ವರ್ಷವಾದಾಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರೆ ಮಕ್ಕಳನ್ನು ಪಡೆಯಲು ವಿಳಂಬ ಮಾಡಬೇಡಿ. ಆದಷ್ಟು ಬೇಗ ಮಕ್ಕಳನ್ನು ಪಡೆಯಿರಿ. 30ರ ನಂತ್ರ ಗರ್ಭಧಾರಣೆ ಸಾಮರ್ಥ್ಯ ತುಂಬಾ ಕಡಿಮೆಯಾಗುತ್ತದೆ. ವಯಸ್ಸು ಹೆಚ್ಚಾದಂತೆ ಪುರುಷರ ವೀರ್ಯ ಕೂಡ ಫಿಟ್ ಆಗಿರುವುದಿಲ್ಲ. ಮಕ್ಕಳಿಗೆ ಕೆಲವೊಂದು ಗಂಭೀರ ರೋಗ ಕಾಡುವ ಸಾಧ್ಯತೆಯಿರುತ್ತದೆ.
35-40 ವರ್ಷವಾದ ಮೇಲೆ ಮಕ್ಕಳನ್ನು ಪಡೆಯುವುದು ಕಷ್ಟವಾಗುತ್ತದೆ. ಮಕ್ಕಳನ್ನು ಗಂಭೀರ ರೋಗ ಕಾಡುವ ಜೊತೆಗೆ ಗರ್ಭಪಾತದ ಅಪಾಯ ಕೂಡ ಹೆಚ್ಚಿರುತ್ತದೆ. 45ರ ನಂತ್ರ ಮಗುವಿಗೆ ಜನ್ಮ ನೀಡಲು ನೀವು ಯೋಚನೆ ಮಾಡ್ತಿದ್ದರೆ ಈಗ್ಲೇ ನಿಮ್ಮ ಆಲೋಚನೆಯನ್ನು ಬದಲಾಯಿಸಿಕೊಳ್ಳಿ. 45ರ ನಂತ್ರ ಹೆರಿಗೆ ಅಪಾಯಕ್ಕೆ ಆಹ್ವಾನ ನೀಡಿದಂತೆ. ಸ್ತನಕ್ಯಾನ್ಸರ್, ರಕ್ತದೊತ್ತಡ, ಮಧುಮೇಹ ಸೇರಿದಂತೆ ಅನೇಕ ಖಾಯಿಲೆಗಳು ಕಾಡುವ ಸಾಧ್ಯತೆ ಹೆಚ್ಚಿರುತ್ತದೆ.