ಸುಟ್ಟಗಾಯಗಳ ಅನುಭವ ಬಹುತೇಕರಿಗೆ ಆಗಿರುತ್ತದೆ. ನೀರು ಕಾಯಿಸುವಾಗ, ಒಲೆ ಮುಂದೆ ಕುಳಿತು ಅಡಿಗೆ ಮಾಡುವಾಗ, ಬಟ್ಟೆಗಳನ್ನು ಇಸ್ತ್ರಿ ಮಾಡುವಾಗ ಹೀಗೆ ಹಲವಾರು ಸಂದರ್ಭದಲ್ಲಿ ನಮ್ಮ ಕೈ ಅಥವಾ ದೇಹದ ಇತರೆ ಭಾಗಗಳನ್ನು ಸುಟ್ಟುಕೊಳ್ಳುವುದು ಸಾಮಾನ್ಯ ಸಂಗತಿ.
* ಸುಟ್ಟ ಗಾಯ ಆದ ಕೂಡಲೇ ಕೆಲವರು ರೆಫ್ರಿಜರೇಟರ್ ನಲ್ಲಿರುವ ಐಸ್ ತೆಗೆದು ಗಾಯದ ಮೇಲೆ ಇಡುತ್ತಾರೆ. ಹೀಗೆ ಮಾಡುವುದು ಸರಿಯಲ್ಲ. ಐಸ್ ನಿಂದ ಸುಟ್ಟಗಾಯ ವಾಸಿಯಾಗುವ ಬದಲು ಚರ್ಮದ ಟಿಶ್ಯು ಅನ್ನು ಹೆಚ್ಚು ಹಾನಿಮಾಡುತ್ತದೆ. ರಕ್ತ ಸಂಚಾರಕ್ಕೆ ಅಡ್ಡಿ ಮಾಡುತ್ತದೆ. ಇದರ ಬದಲಿಗೆ ತಂಪಾದ ಹರಿಯುವ ನೀರಿಗೆ ಗಾಯ ಒಡ್ಡುವುದು ಒಳ್ಳೆಯದು.
* ಮತ್ತೆ ಕೆಲವರು ಬೆಣ್ಣೆ ಸವರುತ್ತಾರೆ. ಇದು ಕೂಡ ಒಳ್ಳೆಯದಲ್ಲ. ಬೆಣ್ಣೆ ಹಚ್ಚುವುದರಿಂದ ಗಾಯದ ಮೇಲೆ ಬ್ಯಾಕ್ಟೀರಿಯಾಗಳು ಉಂಟಾಗಿ ಸೋಂಕು ಹೆಚ್ಚಾಗುತ್ತದೆ.
* ಇನ್ನು ಕೆಲವರು ಟೂತ್ ಪೇಸ್ಟ್ ಹಚ್ಚುತ್ತಾರೆ. ಇದು ಸಹ ಒಳ್ಳೆಯ ಅಭ್ಯಾಸವಲ್ಲ. ಇದರಿಂದ ಕೆಲಹೊತ್ತು ಹಿತಾನುಭವ ಆಗಬಹುದೇ ವಿನಃ ಗಾಯ ವಾಸಿಯಾಗುವುದಿಲ್ಲ. ಬದಲಿಗೆ ಸೋಂಕು ಹೆಚ್ಚಾಗಲು ದಾರಿಯಾಗುತ್ತದೆ.
* ಸುಟ್ಟ ಗಾಯದ ಉರಿ ಕಡಿಮೆ ಮಾಡಲು ನಿಂಬೆಯನ್ನು ಬಳಸುವವರು ಇದ್ದಾರೆ. ಇದರಿಂದ ಗಾಯ ಉಲ್ಬಣಗೊಳ್ಳುವುದು ಹಾಗೂ ಚರ್ಮಕ್ಕೆ ಹಾನಿಯಾಗುವ ಸಾಧ್ಯತೆ ಇದೆ.
* ಸುಟ್ಟ ಗಾಯಗಳಿಗೆ ಮನೆಯಲ್ಲಿ ಲಭ್ಯವಿರುವ ಜೇನುತುಪ್ಪ ಹಚ್ಚುವುದು ಒಳ್ಳೆಯದು. ಜೇನುತುಪ್ಪ ನಂಜು ನಿರೋಧಕ ಹಾಗೂ ಚಿಕಿತ್ಸಾ ಗುಣಗಳನ್ನು ಹೊಂದಿದೆ. ಇದರಿಂದ ಗಾಯದ ಕಲೆಯು ಕಡಿಮೆಯಾಗಲಿದೆ.
* ಸುಟ್ಟ ಗಾಯಕ್ಕೆ ಅಲೋವೆರಾ ಹಚ್ಚಬಹುದು. ಇದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಇದರ ಬಳಕೆಯಿಂದ ಗಾಯ ಬೇಗನೆ ಶಮನಗೊಳ್ಳಲು ಸಹಕಾರಿಯಾಗಲಿದೆ.
* ಇನ್ನೂ ಬಾಳೆಹಣ್ಣಿನ ಸಿಪ್ಪೆಯನ್ನು ಸುಟ್ಟ ಚರ್ಮದ ಭಾಗದ ಮೇಲಿಟ್ಟರೆ ಊತ ಮತ್ತು ನೋವು ಕಡಿಮೆಯಾಗಲಿದೆ. ಬಾಳೆಹಣ್ಣಿನ ಸಿಪ್ಪೆಯೊಂದಿಗೆ ಮೊಸರನ್ನು ಹಚ್ಚಿಕೊಂಡರೆ ಸುಟ್ಟ ಗಾಯ ಬೇಗ ಗುಣವಾಗುತ್ತದೆ.