![](https://kannadadunia.com/wp-content/uploads/2023/03/b7701583-e97b-4717-a5c0-cec5d317533f.jpg)
ತಿನ್ನುವ ಆಹಾರವನ್ನು ವ್ಯರ್ಥ ಮಾಡಬಾರದೆಂದು ಹೇಳುತ್ತೇವೆ. ಆದ್ರೆ ಕೆಲವೊಮ್ಮೆ ಹೋಟೆಲ್ ಗೆ ಹೋದಾಗ ನಮ್ಮ ಊಟಕ್ಕೆ ದುಡ್ಡು ಕೊಟ್ಟಿದ್ದೇವೆಂಬ ಭಾವನೆಯಲ್ಲಿ ಆಹಾರವನ್ನು ತಟ್ಟೆಯಲ್ಲಿ ಹಾಗೇ ಬಿಟ್ಟುಬಿಡುತ್ತಾರೆ. ಇಂತಹ ಘಟನೆಗಳು ನಡೆಯಬಾರದೆಂದು ಇಂದೋರ್ ನಲ್ಲಿ ರೆಸ್ಟೋರೆಂಟ್ ಮಾಲೀಕರೊಬ್ಬರು ತಟ್ಟೆಯಲ್ಲಿ ಊಟವನ್ನು ವ್ಯರ್ಥ ಮಾಡುವವರಿಗೆ ದಂಡದ ಎಚ್ಚರಿಕೆ ನೀಡಿದ್ದಾರೆ.
ಇಲ್ಲಿ ಗ್ರಾಹಕರು ಆಹಾರವನ್ನು ಆರ್ಡರ್ ಮಾಡಿದ್ದರೆ, ಎಲ್ಲವನ್ನೂ ಮುಗಿಸುವುದು ಉತ್ತಮ. ಒಂದು ವೇಳೆ ಆಹಾರವನ್ನು ಬಿಟ್ಟರೆ
50 ರೂಪಾಯಿ ದಂಡ ವಿಧಿಸಲಾಗುತ್ತದೆ. ಈ ಎಚ್ಚರಿಕೆಯನ್ನು ರೆಸ್ಟೋರೆಂಟ್ ಗೋಡೆಗಳ ಮೇಲೆ ಅಂಟಿಸಲಾಗಿದೆ. ಇನ್ನೊಂದು ವಿಶೇಷವೆಂದರೆ ಈ ಹೋಟೆಲ್ ನಲ್ಲಿ 60 ರೂಪಾಯಿಗೆ ಅನಿಯಮಿತ ( ಅನ್ ಲಿಮಿಟೆಡ್ ) ಊಟ ನೀಡಲಾಗುತ್ತದೆ. ಹೀಗಾಗಿ ಜನರು ಈ ಕಾರಣದಿಂದಾಗಿ ಮಿತಿಮೀರಿ ಹೋಗಬಹುದು ಅಥವಾ ಅವರು ಸೇವಿಸುವುದಕ್ಕಿಂತ ಹೆಚ್ಚಿನದನ್ನು ಆರ್ಡರ್ ಮಾಡಬಹುದು. ಈ ಬಗ್ಗೆ ಅವರನ್ನು ಎಚ್ಚರಿಸಲು ಕರ್ನಾವತ್ ರೆಸ್ಟೊರೆಂಟ್ ನಲ್ಲಿ ಆಹಾರವನ್ನು ಪೋಲು ಮಾಡಿದರೆ ದಂಡವಾಗಿ 50 ರೂ. ವಸೂಲಿ ಮಾಡಲಾಗುತ್ತದೆ.
ಆಹಾರ ಪೋಲು ಮಾಡದಿರುವ ಹವ್ಯಾಸವನ್ನು ಜನರಲ್ಲಿ ಮೂಡಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ರೆಸ್ಟೋರೆಂಟ್ ಮಾಲೀಕರಾದ ಅರವಿಂದ್ ಸಿಂಗ್ ಕರ್ನಾವತ್ ಹೇಳಿದರು. ರೈತರು ಕಷ್ಟಪಟ್ಟು ಬೆಳೆ ತಯಾರಿಸಿದ್ದು, ದೇಶದಲ್ಲಿ ಎರಡು ಹೊತ್ತಿನ ಊಟಕ್ಕೂ ಕಷ್ಟಪಡುವ ಜನ ಇದ್ದಾರೆ ಎಂಬುದನ್ನು ಜನ ಸಾಮಾನ್ಯರು ಅರ್ಥ ಮಾಡಿಕೊಳ್ಳಬೇಕು ಎಂದರು.
ಕಡಿಮೆ ಮೊತ್ತಕ್ಕೆ ಅನಿಯಮಿತ ಆಹಾರ ಒದಗಿಸುವ ಅರವಿಂದ್ ಅವರು ತಾವು ಜನರಿಗೆ ಸಹಾಯ ಮಾಡುತ್ತಿರುವುದಾಗಿ ಹೇಳಿದ್ದಾರೆ.
ದಂಡ ವಸೂಲಿ ಮಾಡಿದ ನಂತರ ಗ್ರಾಹಕರು ಬಿಟ್ಟು ಹೋಗುವ ಆಹಾರವನ್ನು ವಿಲೇವಾರಿ ಮಾಡುವುದಿಲ್ಲ. ಬದಲಾಗಿ ಅಗತ್ಯವಿರುವವರಿಗೆ ಆಹಾರವನ್ನು ವಿತರಿಸಲಾಗುತ್ತದೆ ಎಂದು ಅರವಿಂದ್ ಹೇಳಿದರು.
ವಿಶ್ವಸಂಸ್ಥೆಯ 2021 ರ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ ವ್ಯಕ್ತಿಯೊಬ್ಬನಿಂದ ಸರಾಸರಿ 50 ಕೆಜಿಯಷ್ಟು ಆಹಾರವು ವ್ಯರ್ಥವಾಗುತ್ತದೆ. ಮತ್ತೊಂದೆಡೆ ಕಳೆದ ವರ್ಷದ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು 121 ದೇಶಗಳಲ್ಲಿ 107 ನೇ ಸ್ಥಾನದಲ್ಲಿದೆ.