ಭಾರತದಲ್ಲಿ ಹಲವು ಕಂಪನಿಗಳು ವಾಯುಯಾನ ಕ್ಷೇತ್ರದಲ್ಲಿ ಸೇವೆ ನೀಡುತ್ತಿದ್ದು, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಯಾಣಗಳನ್ನು ದಿನನಿತ್ಯವೂ ಕೈಗೊಳ್ಳುತ್ತಿವೆ. ಇದೀಗ ಭಾರತದ ರಾಜ್ಯವೊಂದು ತನ್ನ ಸ್ವಂತ ಏರ್ ಲೈನ್ ಹೊಂದುವ ಹೆಗ್ಗಳಿಕೆಗೆ ಪಾತ್ರವಾಗಲಿದ್ದು, ಕೇಂದ್ರ ನಾಗರಿಕ ವಿಮಾಣಯಾನ ಸಚಿವಾಲಯ ಈ ಪ್ರಯತ್ನಕ್ಕೆ ಈಗಾಗಲೇ ಗ್ರೀನ್ ಸಿಗ್ನಲ್ ನೀಡಿದೆ.
ಹೌದು, ಕೇರಳ ರಾಜ್ಯ ಈ ಹೆಗ್ಗಳಿಕೆಗೆ ಪಾತ್ರವಾಗುತ್ತಿದ್ದು, ದುಬೈ ಮೂಲದ ಇಬ್ಬರು ಉದ್ಯಮಿಗಳು ‘ಏರ್ ಕೇರಳ’ ಸ್ಥಾಪನೆಗೆ ಒತ್ತಾಸೆಯಾಗಿ ನಿಂತಿದ್ದಾರೆ. 2025ರ ಮೊದಲಾರ್ಧದಲ್ಲಿ ‘ಏರ್ ಕೇರಳ’ ತನ್ನ ಸಂಚಾರ ಆರಂಭಿಸಲಿದ್ದು, ಮೊದಲ ಹಂತದಲ್ಲಿ ಟೈಯರ್ 2 ಹಾಗೂ ಟೈಯರ್ 3 ನಗರಗಳನ್ನು ಸಂಪರ್ಕಿಸುತ್ತದೆ.
20 ವಿಮಾನಗಳನ್ನು ಹೊಂದಿದ ಬಳಿಕ ಅಂತರಾಷ್ಟ್ರೀಯ ಸಂಚಾರ ಆರಂಭಿಸಲು ತೀರ್ಮಾನಿಸಲಾಗಿದ್ದು, ಅದರಲ್ಲೂ ಕೇರಳಿಗರು ಅತಿ ಹೆಚ್ಚು ಸಂಖ್ಯೆಯಲ್ಲಿ ನೆಲೆಸಿರುವ ಗಲ್ಫ್ ದೇಶಗಳ ಸಂಚಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
ಕಡಿಮೆ ದರದಲ್ಲಿ ಉತ್ತಮ ಸೇವೆ ನೀಡುವ ಉದ್ದೇಶವನ್ನು ‘ಏರ್ ಕೇರಳ’ ಹೊಂದಿದ್ದು, ಇದರ ಜೊತೆಗೆ 300ಕ್ಕೂ ಅಧಿಕ ಮಂದಿಗೆ ಉದ್ಯೋಗಾವಕಾಶ ನೀಡುವ ನಿರೀಕ್ಷೆ ಇದೆ. ಈಗಾಗಲೇ ವಿಮಾನಗಳ ಖರೀದಿ ಪ್ರಕ್ರಿಯೆ ನಡೆಯುತ್ತಿದ್ದು ಮುಂದಿನ ವರ್ಷದ ಮೊದಲಾರ್ಧದ ವೇಳೆಗೆ ಸಂಚಾರ ಆರಂಭವಾಗಲಿದೆ.