ಪ್ರಧಾನಿ ನರೇಂದ್ರ ಮೋದಿ ತಂಗಿದ್ದ ವೇಳೆ ಆಗಿದ್ದ ಬಿಲ್ ನ ಬಾಕಿ ಹಣ ಪಾವತಿಸದಿದ್ದರೆ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಮೈಸೂರಿನ ರ್ಯಾಡಿಸನ್ ಬ್ಲೂ ಪ್ಲಾಜಾ ಹೋಟೆಲ್ ಎಚ್ಚರಿಸಿದೆ.
2023 ರ ಏಪ್ರಿಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಭೇಟಿ ನೀಡಿ ಹೋಟೆಲ್ ನಲ್ಲಿ ತಂಗಿದ್ದರು. ಈ ವೇಳೆ ಆಗಿದ್ದ ಬಿಲ್ ನ ಬಾಕಿ ಮೊತ್ತ ಒಟ್ಟು 80.6 ಲಕ್ಷ ರೂಪಾಯಿ ಪಾವತಿಸದ ಬಗ್ಗೆ ಹೋಟೆಲ್ ಕಾನೂನು ಕ್ರಮದ ಬೆದರಿಕೆ ಹಾಕಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ಹಾಗು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEF) ಆಯೋಜಿಸಿದ್ದ ಪ್ರಾಜೆಕ್ಟ್ ಟೈಗರ್‌ನ 50 ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಲು ಮೋದಿ ಮೈಸೂರಿಗೆ ಬಂದಿದ್ದರು.
ಕೇಂದ್ರದ ಸಂಪೂರ್ಣ ನೆರವಿನ ಭರವಸೆಯೊಂದಿಗೆ 3 ಕೋಟಿ ವೆಚ್ಚದಲ್ಲಿ ಏಪ್ರಿಲ್ 9 ರಿಂದ 11 ರವರೆಗೆ ಕಾರ್ಯಕ್ರಮ ನಡೆಸಲು ರಾಜ್ಯ ಅರಣ್ಯ ಇಲಾಖೆಗೆ ಸೂಚನೆ ನೀಡಲಾಯಿತು. ಆದಾಗ್ಯೂ, ಎನ್‌ಟಿಸಿಎ ಅಧಿಕಾರಿಗಳು ಮತ್ತು ಪ್ರಧಾನ ಮಂತ್ರಿಗಳ ಅಗತ್ಯವಿರುವ ಕಾರ್ಯಕ್ರಮದ ಹೆಚ್ಚುವರಿ ಚಟುವಟಿಕೆಗಳಿಂದಾಗಿ ಕಾರ್ಯಕ್ರಮದ ಒಟ್ಟು ವೆಚ್ಚವು 6.33 ಕೋಟಿ ರೂ.ಗೆ ಏರಿತು. ಕೇಂದ್ರದಿಂದ 3 ಕೋಟಿ ರೂ.ಬಿಡುಗಡೆಯಾಗಿದ್ದರೂ, ರಾಜ್ಯ ಅರಣ್ಯ ಇಲಾಖೆ ಹಾಗೂ MoEF ನಡುವೆ ನಿರಂತರ ಸಂವಹನ ನಡೆದಿದ್ದರೂ ಉಳಿದ 3.33 ಕೋಟಿ ರೂ.ಗಳನ್ನು ಇನ್ನೂ ಪಾವತಿಸಿಲ್ಲ.
MoEF ಮತ್ತು NTCA ನಡುವಿನ ಪತ್ರವ್ಯವಹಾರದಲ್ಲಿ ಕಾರ್ಯಕ್ರಮದ ವೆಚ್ಚವನ್ನು ಆರಂಭದಲ್ಲಿ 3 ಕೋಟಿ ರೂ.ಗಳಿಗೆ ನಿಗದಿಪಡಿಸಲಾಗಿದೆ. ಆದರೆ ಹೆಚ್ಚುವರಿ ಅವಶ್ಯಕತೆಗಳಿಂದಾಗಿ ಖರ್ಚು ಹೆಚ್ಚಾಯಿತು.
ಕಾರ್ಯಕ್ರಮವನ್ನು ಹೊರಗುತ್ತಿಗೆ ಪಡೆದಿರುವ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯು ಪರಿಷ್ಕೃತ ಕೊಟೇಶನ್ ಅನ್ನು ಸಲ್ಲಿಸಿದ್ದು, ಅದನ್ನು ವೀಡಿಯೊ ಕಾನ್ಫರೆನ್ಸ್ ಸಮಯದಲ್ಲಿ ಎಲ್ಲಾ ಅಧಿಕಾರಿಗಳಿಗೂ ತಲುಪಿಸಲಾಗಿದೆ.
ಕರ್ನಾಟಕದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಅವರು ಸೆಪ್ಟೆಂಬರ್ 29, 2023 ರಂದು ನವದೆಹಲಿಯಲ್ಲಿ NTCA ಯ ಡೆಪ್ಯುಟಿ ಇನ್ಸ್ ಪೆಕ್ಟರ್ ಜನರಲ್ ಅವರಿಗೆ ಪತ್ರ ಬರೆದು, ಬಿಲ್ ಪಾವತಿ ಬಾಕಿಯಿರುವ ವಿಷಯವನ್ನೂ ನೆನಪಿಸಿದ್ದಾರೆ. ಆದಾಗ್ಯೂ, NTCA ಫೆಬ್ರವರಿ 12, 2024 ರಂದು ಪ್ರತಿಕ್ರಿಯಿಸಿ, ಮೈಸೂರಿನ ರಾಡಿಸನ್ ಬ್ಲೂ ಪ್ಲಾಜಾದಲ್ಲಿ ಪ್ರಧಾನ ಮಂತ್ರಿಯವರ ವಾಸ್ತವ್ಯದ ವೆಚ್ಚವನ್ನು ರಾಜ್ಯ ಸರ್ಕಾರವು ಮರುಪಾವತಿಸಬೇಕು ಎಂದು ಹೇಳಿದೆ.
ಬಳಿಕ ಮಾರ್ಚ್ 22, 2024 ರಂದು ಪ್ರಸ್ತುತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುಭಾಷ್ ಕೆ. ಮಾಲ್ಖೇಡೆ ಎನ್‌ಟಿಸಿಎಗೆ ಪ್ರಧಾನ ಮಂತ್ರಿಯ ವಾಸ್ತವ್ಯಕ್ಕಾಗಿ 80.6 ಲಕ್ಷ ರೂ. ಹೋಟೆಲ್ ಬಿಲ್ ಸೇರಿದಂತೆ ಪಾವತಿಸದ ಬಾಕಿ ಹಣದ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಮೇ 21, 2024 ರಂದು, ರಾಡಿಸನ್ ಬ್ಲೂ ಪ್ಲಾಜಾದ ಹಣಕಾಸು ಜನರಲ್ ಮ್ಯಾನೇಜರ್, ರಾಜ್ಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜು ಅವರಿಗೆ ಪತ್ರ ಬರೆದು ಹೋಟೆಲ್ ಗೆ ಪಾವತಿಸದ ಬಿಲ್‌ಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಬಾಕಿ ಹಣ ಪಾವತಿ ವೇಳೆ ವಾರ್ಷಿಕ 18% ರಷ್ಟು ಬಡ್ಡಿ ಸೇರಿಸಿ ಹಣ ನೀಡುವಂತೆ ಹೇಳಿದ್ದಾರೆ. ಒಂದು ವೇಳೆ ಜೂನ್ 1, 2024 ರೊಳಗೆ ಬಾಕಿಯನ್ನು ಇತ್ಯರ್ಥಪಡಿಸದಿದ್ದರೆ ಕಾನೂನು ಕ್ರಮ ಜರುಗಿಸುವುದಾಗಿ ಹೋಟೆಲ್ ಆಡಳಿತ ಮಂಡಳಿ ಬೆದರಿಕೆ ಹಾಕಿದೆ.
ಆದರೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಬಸವರಾಜು ಮಾತನಾಡಿ, ಅದು ಕೇಂದ್ರ ಸರ್ಕಾರದ ಕಾರ್ಯಕ್ರಮವಾಗಿದ್ದು ಬಾಕಿ ಹಣ ಪಾವತಿ ಎಂದಿರುವ ಕೇಂದ್ರದ ನಿರ್ದೇಶನಗಳನ್ನು ತಿರಸ್ಕರಿಸಲಾಗಿದೆ ಎಂದಿದ್ದಾರೆ.