ನಿತ್ಯದ ಕೆಲಸ ಹೆಚ್ಚಿದರೆ, ಬಿಸಿಲಿಗೆ ಹೋಗಿ ಬಂದರೆ, ಕಿರಿಕಿರಿಯಾದರೆ ಮೊದಲು ಕಾಣಿಸಿಕೊಳ್ಳುವುದೇ ತಲೆನೋವು. ಇದನ್ನು ನಿವಾರಿಸಲು ಪ್ರತಿ ಬಾರಿ ಮಾತ್ರೆಗಳ ಮೊರೆ ಹೋಗಬೇಕಿಲ್ಲ. ಮನೆ ಮದ್ದುಗಳಲ್ಲೂ ಅದಕ್ಕೆ ಪರಿಹಾರವಿದೆ.
ನಿಮ್ಮ ತಲೆನೋವು ಲೈಟ್ ಆಗಿದ್ದು, ಬಹಳ ಹೊತ್ತಿನಿಂದ ಕಾಡುತ್ತಿದ್ದರೆ ಬಿಸಿಯಾದ ನೀರಿಗೆ ಚಿಟಿಕೆ ಉಪ್ಪು ಹಾಕಿ ಕುಡಿಯಿರಿ. ರಕ್ತದೊತ್ತಡ ಸಮಸ್ಯೆ ಇದ್ದವರು ಸರಿಯಾಗಿ ಬಿಸಿ ನೀರು ಕುಡಿದರೂ ಸಾಕು, ತಲೆನೋವು ಕಡಿಮೆಯಾಗುತ್ತದೆ.
ತಲೆನೋವು ಹೆಚ್ಚಿದರೆ ಐಸ್ ತುಂಡನ್ನು ತೆಗೆದುಕೊಂಡು ಹಣೆ ಭಾಗಕ್ಕೆ ಮಸಾಜ್ ಮಾಡಿ. ಇದಕ್ಕೂ ನಿಯಂತ್ರಣಕ್ಕೆ ಬಾರದಿದ್ದರೆ ಕಣ್ಣು ಮುಚ್ಚಿ ಮಲಗಿ. ಮುಖ್ಯವಾಗಿ ತಲೆ ನೋವು ನಿವಾರಣೆಗೆ ಬೇಕಾಗುವುದು ವಿಶ್ರಾಂತಿ.
ತಲೆ ಭಾಗವನ್ನು ಚೆನ್ನಾಗಿ ಮಸಾಜ್ ಮಾಡುವುದರಿಂದಲೂ ತಲೆನೋವು ಕಡಿಮೆಯಾಗುತ್ತದೆ. ಹಣೆ, ಕತ್ತು, ಕಿವಿ ಭಾಗ ಹಾಗೂ ಕಣ್ಣಿನ ಮೇಲ್ಭಾಗದಲ್ಲಿ ನಿಧಾನವಾಗಿ ಮಸಾಜ್ ಮಾಡಿ. ಶುಂಠಿ ಹಾಗೂ ನಿಂಬೆ ರಸವನ್ನು ಸಮ ಪ್ರಮಾಣದಲ್ಲಿ ಹಾಕಿ ಕುಡಿದರೂ ತಲೆನೋವು ಮಾಯವಾಗುತ್ತದೆ.
ನೀಲಗಿರಿ ಎಣ್ಣೆ ಹಚ್ಚಿ ತಲೆಗೆ ಬಿಸಿ ನೀರಿನ ಸ್ನಾನ ಮಾಡಿ ಬಂದರೆ ಎಲ್ಲಾ ರೀತಿಯ ತಲೆ ನೋವೂ ಕಡಿಮೆಯಾಗುತ್ತದೆ. ಪುದೀನಾ ರಸವನ್ನು ವಾರಕ್ಕೊಮ್ಮೆ ಹಚ್ಚುವುದರಿಂದಲೂ ತಲೆ ನೋವಿನಿಂದ ದೂರವಿರಬಹುದು. ಮನೆಯಲ್ಲೇ ಮಸಾಲೆ ಚಹಾ ತಯಾರಿಸಿ ಕುಡಿದು ನೋಡಿ, ನಿಮ್ಮ ತಲೆ ನೋವು ಹೇಳ ಹೆಸರಿಲ್ಲದಂತೆ ಓಡಿ ಹೋಗುತ್ತದೆ.