ನೆಲ್ಲಿಕಾಯಿ ಎಂದಾಕ್ಷಣ ಎಲ್ಲರ ಬಾಯಲ್ಲೂ ನೀರೂರುವುದು ಸಹಜ. ಮಲೆನಾಡಿನ ಬೆಟ್ಟ ಪ್ರದೇಶಗಳಲ್ಲಿ ಬೆಳೆಯುವ ಕಾಯಿಗೆ ಬೆಟ್ಟದ ನೆಲ್ಲಿಕಾಯಿ ಎಂಬ ಹೆಸರಿದೆ. ಈಗ ಬೇರೆ ಪ್ರದೇಶಗಳಲ್ಲೂ ಇತರ ಕಶಿ ಪ್ರಬೇಧಗಳನ್ನು ಬೆಳೆಯಲಾಗುತ್ತಿದೆ. ಆದರೆ ಬೆಟ್ಟದ ನೆಲ್ಲಿಕಾಯಿಯ ರುಚಿ ಹಾಗೂ ಔಷಧೀಯ ಮಹತ್ವವೇ ವಿಭಿನ್ನ ಹಾಗೂ ಅಧಿಕ. ದೀಪಾವಳಿ ಹಾಗೂ ಕಾರ್ತಿಕ ಮಾಸದ ತುಳಸಿ ಪೂಜೆಯ ದಿನ ನೆಲ್ಲಿಕಾಯಿಗೆ ರಾಜಮರ್ಯಾದೆ ಲಭಿಸುತ್ತದೆ. ಕಿತ್ತಳೆ ಹಣ್ಣಿಗಿಂತಲೂ ಇಪ್ಪತ್ತು ಪಟ್ಟು ಹೆಚ್ಚು ವಿಟಮಿನ್ ಸಿ ಇದರಲ್ಲಿದೆ.
ನೆಲ್ಲಿಕಾಯಿ ಕೇವಲ ಹುಳಿ ಅಥವಾ ಕಹಿ ಆಗಿರುವುದಿಲ್ಲ. ಇದನ್ನು ತಿಂದು ನೀರು ಕುಡಿದರೆ ಬಾಯಿ ಸಿಹಿಯಾಗುತ್ತದೆ. ನೆಲ್ಲಿಕಾಯಿ ತಿನ್ನಲು ಹುಳಿ ಎನ್ನುವವರು ನೀವಾಗಿದ್ದರೆ ಆದನ್ನು ಉಪ್ಪಿನಕಾಯಿ, ಚಟ್ನಿ ಇಲ್ಲವೇ ತಂಬುಳಿ ಮಾಡಿ ಸವಿಯಿರಿ. ಅದನ್ನು ಉಪ್ಪು ನೀರಿನಲ್ಲಿ ನೆನೆಸಿಟ್ಟು ವರ್ಷದವರೆಗೂ ಬಳಸುತ್ತಿರಬಹುದು.
ಬೆಟ್ಟದ ನೆಲ್ಲಿಕಾಯಿಯನ್ನು ಸಣ್ಣಗೆ ಕತ್ತರಿಸಿ ನೀರಿನೊಂದಿಗೆ ಕುದಿಸಿ, ಚಿಟಿಕೆ ಅರಶಿನ ಪುಡಿ ಸೇರಿಸಿ ಕುಡಿಯುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.
ಹಸಿ ನೆಲ್ಲಿಕಾಯಿ ಜಜ್ಜಿ ರಸಕ್ಕೆ ಮುಲ್ತಾನಿ ಮಿಟ್ಟಿ ಸೇರಿಸಿ ಮುಖಕ್ಕೆ ಹಚ್ಚುವುದರಿಂದ ತ್ವಚೆಯ ಹೊಳಪು ಹೆಚ್ಚಿ ಕಾಂತಿಯುತಗೊಳ್ಳುತ್ತದೆ. ಹಸಿ ನೆಲ್ಲಿಕಾಯಿಯ ರಸವೇ ಸಾಕು, ನೀರು ಬೆರೆಸಬೇಕಿಲ್ಲ.
ಇದೇ ರಸಕ್ಕೆ ಜೇನುತುಪ್ಪ ಬೆರೆಸಿ ಸವಿಯುವುದರಿಂದ ಉಸಿರಾಟದ ಸಮಸ್ಯೆಗಳು, ಹೃದಯ ಸಂಬಂಧಿ ರೋಗಗಳು ದೂರವಾಗುತ್ತವೆ. ನೆಲ್ಲಿಕಾಯಿ ರಸಕ್ಕೆ ಬೆಲ್ಲ ಸೇರಿಸಿ ಕುಡಿಯುವುದರಿಂದ ಹೊಟ್ಟೆ ನೋವು ನಿವಾರಣೆಯಾಗುತ್ತದೆ. ಕಫ ನಿವಾರಿಸುವ ಶಕ್ತಿಯೂ ನೆಲ್ಲಿಕಾಯಿಗಿದೆ. ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುವ ನೆಲ್ಲಿಕಾಯಿ ದೇಹದ ತೂಕ ಇಳಿಸಲೂ ಉಪಕಾರಿ.
ತಲೆ ಕೂದಲಿಗೆ ಹಚ್ಚುವ ಎಣ್ಣೆಯನ್ನು ತುಸು ಬಿಸಿ ಮಾಡಿ. ಮೊದಲೇ ಕತ್ತರಿಸಿ ಬಿಸಿಲಿನಲ್ಲಿ ಒಣಗಿಸಿ ಇಟ್ಟುಕೊಂಡ ನೆಲ್ಲಿಕಾಯಿ ತುಂಡುಗಳನ್ನು ಹಾಕಿ ಕುದಿಸಿ. ಎರಡು ಗಂಟೆ ಹೊತ್ತು ತಣಿಯಲು ಬಿಡಿ. ಬಳಿಕ ಪ್ರತಿದಿನ ಇದನ್ನು ತಲೆಗೆ ಹಚ್ಚುವುದರಿಂದ ಕೂದಲು ಸೊಂಪಾಗಿ ಉದ್ದವಾಗಿ ಬೆಳೆಯುತ್ತದೆ.