ಇಂಗ್ಲೆಂಡ್ ನಲ್ಲಿ ವೃದ್ಧೆಯೊಬ್ಬರು ಸುಮಾರು 120 ಬಸ್‌ಗಳಲ್ಲಿ ಸುಮಾರು 3,540 ಕಿ.ಮೀ. ದೂರ ಪ್ರಯಾಣಿಸಿದ್ದಾರೆ. ಅದು ಕೂಡ ಯಾವುದೇ ವೆಚ್ಚವಿಲ್ಲದೆ ಇಷ್ಟೊಂದು ದೂರ ಅವರು ಕ್ರಮಿಸಿದ್ದಾರೆ.
ಹೌದು, ಉಚಿತ ಬಸ್ ಪಾಸ್ ಪಡೆದಿರುವ 75 ವರ್ಷದ ಪೆನ್ನಿ ಇಬ್ಬೋಟ್ ಎಂಬಾಕೆ ಇಂಗ್ಲೆಂಡ್‌ನಲ್ಲಿ ಆರು ವಾರಗಳ ಬಸ್ ಪ್ರಯಾಣ ಮಾಡಿದ್ದಾರೆ. ಆಕೆ ದಿನಕ್ಕೆ ಎಂಟು ಗಂಟೆಗಳ ಕಾಲ ಬೇರೆ ಬೇರೆ ಬಸ್‌ಗಳಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುತ್ತಿದ್ದರು. ತನ್ನ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಕೊನೆಯ 20 ಕಿ.ಮೀ. ವರೆಗೆ ತೆರೆದ-ಮೇಲ್ಭಾಗದ ಬಸ್ ನಲ್ಲಿ ಸಹ ಈಕೆ ಪ್ರಯಾಣ ಮಾಡಿದ್ದಾರೆ.
ಪ್ರವಾಸವನ್ನು ಮೊದಲಿಗೆ ಮಾರ್ಚ್ 2020 ಕ್ಕೆ ಯೋಜಿಸಲಾಗಿತ್ತು. ಆದರೆ, ಸಾಂಕ್ರಾಮಿಕ ರೋಗದಿಂದಾಗಿ ಅದನ್ನು ಮೊಟಕುಗೊಳಿಸಬೇಕಾಯಿತು. ವೆಸ್ಟ್ ಸಸೆಕ್ಸ್‌ನಲ್ಲಿರುವ ಸೇಂಟ್ ವಿಲ್ಫ್ರಿಡ್ ಹಾಸ್ಪೈಸ್‌ಗಾಗಿ ಹಣವನ್ನು ಸಂಗ್ರಹಿಸಲು ಇಂಗ್ಲೆಂಡ್‌ನಾದ್ಯಂತ ಪೆನ್ನಿ ಪ್ರಯಾಣಿಸಿದ್ದಾರೆ.
ಇಡೀ ಪ್ರಯಾಣವು ಐದು ವಾರಗಳು ಮತ್ತು ಐದು ದಿನಗಳನ್ನು ತೆಗೆದುಕೊಂಡಿದೆ. ಆ ಸಮಯದಲ್ಲಿ ವೃದ್ಧೆ ಪೆನ್ನಿ ಇಬ್ಬೋಟ್ ಬಹಳಷ್ಟು ಕಾಳಜಿಯುಳ್ಳ, ದಯೆಯುಳ್ಳ ಜನರನ್ನು ಭೇಟಿಯಾಗಿದ್ದಾರಂತೆ. ದಾರಿಯುದ್ದಕ್ಕೂ ಮಲಗಲು ಆರಾಮದಾಯಕವಾದ ಹಾಸಿಗೆ ಹಾಗೂ ಒಳ್ಳೆಯ ಉಪಹಾರವನ್ನು ಪೆನ್ನಿ ಸೇವಿಸಿದ್ದಾರೆ.
ಸೆಪ್ಟೆಂಬರ್ 6ರಂದು ತನ್ನ ಪ್ರವಾಸವನ್ನು ಪ್ರಾರಂಭಿಸಿದ ವೃದ್ಧೆ ಪೆನ್ನಿ ಇಬ್ಬೋಟ್ ಅಕ್ಟೋಬರ್ 16ಕ್ಕೆ ಪ್ರವಾಸವನ್ನು ಕೊನೆಗೊಳಿಸಿದ್ದಾರೆ. ಈ ವೇಳೆ ಒಟ್ಟು 120 ಬಸ್ ಗಳಲ್ಲಿ ಸಂಚರಿಸಿದ್ದಾರೆ.