ಬಾಳೆಹಣ್ಣು ತಿನ್ನೋಕೆ ಎಷ್ಟೊಂದು ರುಚಿಕರವೋ ಆರೋಗ್ಯದ ದೃಷ್ಟಿಯಿಂದಲೂ ಸಹ ದೇಹಕ್ಕೆ ತುಂಬಾನೇ ಒಳ್ಳೆಯದು. ಬಾಳೆಹಣ್ಣಿನಲ್ಲಿ ಅಗಾಧ ಪ್ರಮಾಣದಲ್ಲಿ ಫೈಬರ್ ಅಂಶ ಅಡಗಿದೆ. ಈ ಬಾಳೆ ಹಣ್ಣಿನ ಸೇವನೆಯಿಂದ ಜೀರ್ಣಶಕ್ತಿ ಕೂಡ ಸುಧಾರಿಸುತ್ತೆ. ಈ ಎಲ್ಲದರ ಜೊತೆಗೆ ಬಾಳೆಹಣ್ಣು ನೈಸರ್ಗಿಕ ಸೌಂದರ್ಯವರ್ಧಕವಾಗಿಯೂ ಕೆಲಸ ಮಾಡಬಲ್ಲುದು.
ಬಾಳೆಹಣ್ಣಿನಲ್ಲಿ ಪೊಟ್ಯಾಷಿಯಂ ಅಂಶ ಹೇರಳವಾಗಿದೆ. ಹೀಗಾಗಿ ನೀವು ಇದನ್ನ ಮಾಯಿಶ್ಚರೈಸರ್ ರೀತಿಯಲ್ಲಿ ಬಳಕೆ ಮಾಡಬಹುದು. ಸಿಪ್ಪೆ ಸುಲಿದ ಬಾಳೆಹಣ್ಣನ್ನ ಚೆನ್ನಾಗಿ ಸ್ಮಾಶ್ ಮಾಡಿ. ಇದನ್ನ ಮುಖಕ್ಕೆ ಹಚ್ಚಿಕೊಂಡು 5 ನಿಮಿಷಗಳ ಕಾಲ ಹಾಗೇ ಬಿಡಿ. ಬಳಿಕ ತಂಪಾದ ನೀರಿನಿಂದ ನಿಮ್ಮ ಮುಖವನ್ನ ತೊಳೆದುಕೊಳ್ಳಿ.
ಬಾಳೆಹಣ್ಣಿನ ಸಿಪ್ಪೆಯಲ್ಲಿ ಆಂಟಿಆಕ್ಸಿಡೆಂಟ್ ಅಂಶ ಅಡಗಿದೆ. ಇದು ನಿಮ್ಮ ಮುಖ ಕಾಂತಿಯುತವಾಗಿರಲು ಸಹಾಯ ಮಾಡುತ್ತೆ. ಮೊಡವೆ ಸಮಸ್ಯೆಯಿಂದ ಬಳಲುತ್ತಿರುವವರು ಬಾಳೆಹಣ್ಣಿನ ಸಿಪ್ಪೆಯಿಂದ ಮುಖಕ್ಕೆ ಮಸಾಜ್ ಮಾಡಿಕೊಂಡಲ್ಲಿ ಉತ್ತಮ ಫಲಿತಾಂಶ ದೊರೆಯಲಿದೆ.
ಕಣ್ಣುಗಳು ಊದಿಕೊಳ್ಳುವ ಸಮಸ್ಯೆ ಇರುವವರಿಗೂ ಸಹ ಬಾಳೆ ಹಣ್ಣು ಪ್ರಯೋಜನಕಾರಿಯಾಗಿದೆ. ಸ್ಮ್ಯಾಶ್ ಮಾಡಿದ ಬಾಳೆ ಹಣ್ಣನ್ನ ಊದಿಕೊಂಡ ಜಾಗದಲ್ಲಿ ಲೇಪಿಸಿ. ಇದಕ್ಕಾಗಿ ನೀವು ಬಾಳೆ ಹಣ್ಣಿನ ಸಿಪ್ಪೆಯನ್ನೂ ಬಳಕೆ ಮಾಡಬಹುದು.