ಬೇಸಿಗೆ ಶುರುವಾಗಿದೆ. ಬಿಸಿಲ ಧಗೆ ನಿಧಾನವಾಗಿ ಹೆಚ್ಚಾಗ್ತಿದೆ. ಬೇಸಿಗೆಯಲ್ಲಿ ಆರೋಗ್ಯ ರಕ್ಷಣೆ ಸವಾಲಿನ ಕೆಲಸ. ಕೊರೊನಾ ಸಂದರ್ಭದಲ್ಲಿ ಜನರು ಮತ್ತಷ್ಟು ಜಾಗರೂಕರಾಗಿರಬೇಕಾಗುತ್ತದೆ. ಬೇಸಿಗೆಯಲ್ಲಿ ಸದಾ ತಣ್ಣನೆ ಆಹಾರ ಸೇವನೆ ಮಾಡಬೇಕೆನ್ನಿಸುತ್ತದೆ. ಬೇಸಿಗೆಯಲ್ಲಿ ಹಸಿವು ಕಡಿಮೆ. ಆಯುರ್ವೇದದ ಪ್ರಕಾರ, ಬೇಸಿಗೆ ಕಾಲವು ಪಿತ್ತರಸದ ತಿಂಗಳು. ಪಿತ್ತ ಹೆಚ್ಚಿಸುವ ಹಾಗೂ ಆರೋಗ್ಯ ಹಾಳು ಮಾಡುವ ಯಾವುದೇ ಆಹಾರ ಸೇವನೆ ಮಾಡಬಾರದು.
ಎಣ್ಣೆಯುಕ್ತ ಮತ್ತು ಕರಿದ ಆಹಾರದಿಂದ ದೂರವಿರುವುದು ಒಳ್ಳೆಯದು. ಸಮೋಸಾ, ಕಚೋರಿ, ಪಕೋಡಾ, ವಡಾ ಪಾವ್ ಜೊತೆ ಜಂಕ್ ಫುಡ್ ನಂತಹ ಬರ್ಗರ್, ಪಿಜ್ಜಾದಂತಹ ಕರಿದ ವಸ್ತುಗಳು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಎಲ್ಲ ಋತುವಿನಲ್ಲೂ ಇದ್ರಿಂದ ದೂರವಿರುವುದು ಒಳ್ಳೆಯದು. ವಿಶೇಷವಾಗಿ ಬೇಸಿಗೆಯಲ್ಲಿ ಇದನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಎಣ್ಣೆ ಪದಾರ್ಥ ಸೇವನೆಯಿಂದ ಹೊಟ್ಟೆ ಭಾರವಾಗುತ್ತದೆ. ಜೀರ್ಣಕ್ರಿಯೆ ನಿಧಾನವಾಗುತ್ತದೆ.
ಚಹಾ-ಕಾಫಿಯನ್ನು ಇಷ್ಟಪಡುವ ಜನರು, ಬೇಸಿಗೆ ಕಾಲದಲ್ಲಿ ದಿನವಿಡೀ ಹಲವಾರು ಬಾರಿ ಚಹಾ-ಕಾಫಿಯನ್ನು ಕುಡಿಯುತ್ತಾರೆ. ಆದರೆ ಬೇಸಿಗೆಯಲ್ಲಿ ಈ ಬಿಸಿ ಪಾನೀಯಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಬೇಕು. ಇದ್ರಿಂದ ಪಿತ್ತ ಹೆಚ್ಚಾಗುತ್ತದೆ. ಬಿಸಿಯಾದ ಪಾನೀಯ ಕುಡಿಯುವುದರಿಂದ ಪಿತ್ತರಸ ಹೆಚ್ಚಾಗುತ್ತದೆ. ದೇಹದ ಆಂತರಿಕ ಉಷ್ಣತೆಯೂ ಹೆಚ್ಚಾಗುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಗೆ ತೊಂದರೆಯುಂಟು ಮಾಡುತ್ತದೆ.
ಚಿಕನ್-ಮಟನ್ ನಂತಹ ಆಹಾರಗಳು ಸಹ ಸುಲಭವಾಗಿ ಜೀರ್ಣವಾಗುವುದಿಲ್ಲ. ಹಾಗಾಗಿ ಬೇಸಿಗೆಯಲ್ಲಿ ಮಾಂಸದಿಂದ ದೂರವಿರುವುದು ಒಳ್ಳೆಯದು. ಚಿಕನ್-ಮಟನ್ ನಲ್ಲಿ ಕೊಬ್ಬು, ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ ಬಹಳ ಅಧಿಕವಾಗಿದೆ. ಇದು ದೇಹದ ಶಾಖವನ್ನು ಹೆಚ್ಚಿಸುತ್ತದೆ.
ಬೇಸಿಗೆಯಲ್ಲಿ ಹೆಚ್ಚು ಮಸಾಲೆಯುಕ್ತ ಆಹಾರ ತಿನ್ನಬಾರದು. ಮೆಣಸಿನಕಾಯಿಯಲ್ಲಿ ಕ್ಯಾಪ್ಸೈಸಿನ್ ಇರುವುದರಿಂದ ಪಿತ್ತ ಹೆಚ್ಚುತ್ತದೆ. ಇದು ಅತಿಯಾದ ಬೆವರುವಿಕೆಗೆ ಕಾರಣವಾಗುತ್ತದೆ. ನಿರ್ಜಲೀಕರಣಕ್ಕೆ ಕಾರಣವಾಗಬಹುದು.
ಐಸ್ ಕ್ರೀಮ್ ಮತ್ತು ತಂಪು ಪಾನೀಯಗಳಂತಹ ತಣ್ಣಗಿರುವ ಪದಾರ್ಥಗಳನ್ನು ಸೇವಿಸಬಾರದು. ಇದ್ರಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬಿರುತ್ತದೆ. ಐಸ್ ಕ್ರೀಮ್ ಜೀರ್ಣಕ್ರಿಯೆಯ ಸಮಯದಲ್ಲಿ ದೇಹದ ಉಷ್ಣತೆಯು ಹೆಚ್ಚಾಗುತ್ತದೆ. ದೇಹದ ತಾಪಮಾನ ಸಾಮಾನ್ಯವಾಗಿದ್ದಾಗ ಮಾತ್ರ ಐಸ್ ಕ್ರೀಂ ಸೇವನೆ ಮಾಡಿ. ಬಿಸಿಲಿನಿಂದ ಬಂದ ತಕ್ಷಣ ಐಸ್ ಕ್ರೀಂ ಸೇವನೆ ಮಾಡಿದ್ರೆ ನೆಗಡಿ, ಜ್ವರ ಕಾಡುತ್ತದೆ.