ಇದು ಕ್ಯಾನ್ಸರ್ ಯುಗವೆಂದ್ರೆ ತಪ್ಪಾಗಲಾರದು. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಕ್ಯಾನ್ಸರ್ ದುಸ್ವಪ್ನವಾಗಿ ಕಾಡ್ತಿದೆ. ನಮ್ಮ ದೇಹ ಅನೇಕ ಕೋಶಗಳನ್ನು ಹೊಂದಿರುತ್ತದೆ. ಈ ಕೋಶಗಳಲ್ಲಿ ಏರುಪೇರಾಗಿ ಅಸಹಜವಾಗಿ ಕೋಶಗಳು ಬೆಳವಣಿಗೆ ಹೊಂದುತ್ತಿದ್ದರೆ ಅದು ಕ್ಯಾನ್ಸರ್ ಗೆ ಕಾರಣವಾಗುತ್ತದೆ.
ಕ್ಯಾನ್ಸರ್ ಬಂದ ಮೇಲೆ ಕಷ್ಟಪಡುವ ಬದಲು ಕ್ಯಾನ್ಸರ್ ಬರದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಕೆಲ ಆಹಾರಗಳಲ್ಲಿ ಕ್ಯಾನ್ಸರ್ ತಡೆಗಟ್ಟುವ ಶಕ್ತಿಯಿದೆ.
ದ್ರಾಕ್ಷಿ ಅತ್ಯುತ್ತಮ ಆಹಾರಗಳಲ್ಲಿ ಒಂದು. ಕೆಂಪು ಬಣ್ಣದ ದ್ರಾಕ್ಷಿಯಲ್ಲಿ ಆಕ್ಟಿನ್ ಎಂಬ ಆಂಟಿ ಆಕ್ಸಿಡೆಂಟ್ ಇರುತ್ತದೆ. ಇದು ಕ್ಯಾನ್ಸರ್ ವಿರುದ್ಧ ಹೋರಾಡುವ ಕೆಲಸ ಮಾಡುತ್ತದೆ.
ವಿಟಮಿನ್ ಹಾಗೂ ಪೋಷಕಾಂಶವಿರುವ ಹಣ್ಣು-ತರಕಾರಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಬೇಕು. ತರಕಾರಿ ಸೇವನೆಯಿಂದ ಅನೇಕ ರೀತಿಯ ಕ್ಯಾನ್ಸರ್ ಬರದಂತೆ ತಡೆಯಬಹುದು.
ಪ್ರತಿ ದಿನ ಗ್ರೀನ್ ಟೀ ಸೇವನೆಯನ್ನು ಅಗತ್ಯವಾಗಿ ಮಾಡಿ. ಅದು ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿ ನೀಡುತ್ತದೆ.
ಅಡುಗೆಗೆ ಆಲಿವ್ ಆಯಿಲ್ ಬಳಸಿ. ಇದು ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.
ಬೆಳ್ಳುಳ್ಳಿ ಹಾಗೂ ಈರುಳ್ಳಿ ಸೇವನೆಯನ್ನು ಮರೆಯಬೇಡಿ. ಬೆಳ್ಳುಳ್ಳಿ ಹಾಗೂ ಈರುಳ್ಳಿ ಸೇವನೆಯಿಂದ ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿ ವೃದ್ಧಿಯಾಗುತ್ತದೆ.
ಸಾಲ್ಮನ್ ಮೀನನ್ನು ಹೆಚ್ಚಾಗಿ ಸೇವನೆ ಮಾಡಿ. ಇದ್ರಲ್ಲಿರುವ ಒಮೆಗಾ 3 ಕೊಬ್ಬಿನಾಮ್ಲಗಳು ಬಹಳ ಪ್ರಯೋಜನಕಾರಿ.
ಟೋಮೋಟೋವನ್ನು ಹೆಚ್ಚಾಗಿ ತಿನ್ನಬೇಕು. ಟೋಮೋಟೋದಲ್ಲಿರುವ ಆಂಟಿ ಆಕ್ಸಿಡೆಂಟ್ ಲೈಕೋಪೀನ್, ಬೀಟಾ ಕ್ಯಾರೊಟಿನ್, ಆಲ್ಫಾ ಕ್ಯಾರೊಟಿನ್ ಮತ್ತು ವಿಟಮಿನ್ ಇ ಗಿಂತ ಪ್ರಬಲವಾಗಿರುತ್ತದೆ.
ಬ್ರೋಕೋಲಿ ಕೂಡ ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ. ವಾರದಲ್ಲಿ ಎರಡು ಅಥವಾ ಮೂರು ಬಾರಿ ಸೇವನೆ ಮಾಡಬೇಕು. ಬ್ರೋಕೋಲಿಯನ್ನು ಸೂಪ್ ಅಥವಾ ಸಲಾಡ್ ರೀತಿ ಸೇವನೆ ಮಾಡಬಹುದು.