
ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಮತ್ತು ಅವರ ಪತ್ನಿ ಪ್ರಿಸ್ಸಿಲ್ಲಾ ಚಾನ್ ಬಗ್ಗೆ ಬಹಳ ವಿಚಿತ್ರವಾದ ಸಂಗತಿಯೊಂದು ಬೆಳಕಿಗೆ ಬಂದಿದೆ. ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನ ಮಾಲೀಕರೀಗ ಭೂಗತ ಬಂಕರ್ ಒಂದನ್ನು ನಿರ್ಮಿಸುತ್ತಿದ್ದಾರೆ. 5000 ಚದರ ಅಡಿ ವಿಸ್ತಾರವಾದ ಈ ಬಂಕರ್, ಹವಾಯಿಯಲ್ಲಿರುವ ಅವರ 1400 ಎಕರೆ ಜಮೀನಿನಲ್ಲಿ ತಲೆಯೆತ್ತಲಿದೆ.
ಭೂಗತ ಬಂಕರ್‌ನ ಬೆಲೆ ಎಷ್ಟು ಗೊತ್ತಾ ?
ಈ ಭೂಗತ ಬಂಕರ್‌ನ ಬೆಲೆ ಅಂದಾಜು 27 ಕೋಟಿ ಡಾಲರ್‌ಗಳು. ಇದರಲ್ಲಿ ಭೂಮಿಯ ವೆಚ್ಚವೂ ಸೇರಿದೆ. ಇದಲ್ಲದೇ ಅಲ್ಲಿ ಕೆಲಸ ಮಾಡುವವರಿಂದ ಯಾವುದೇ ಮಾಹಿತಿ ಹೊರಹಾಕದಂತೆ ಒಪ್ಪಂದಗಳಿಗೂ ಸಹಿ ಹಾಕಿಸಿಕೊಳ್ಳಲಾಗಿದೆ.
ಜುಕರ್‌ಬರ್ಗ್ ದಂಪತಿ ಈ ವಿಚಿತ್ರ ನಿರ್ಧಾರಕ್ಕೆ ಬಂದಿರೋದಕ್ಕೆ ಕಾರಣವೇನು ಅನ್ನೋದು ಇನ್ನೂ ನಿಗೂಢ. ಹವಾಯಿಯಂತಹ ಸುಂದರ ಸ್ಥಳದಲ್ಲಿ ನಿರ್ಮಾಣವಾಗುತ್ತಿರುವ ಈ ಬಂಕರ್‌ಗೆ ಹೊರಜಗತ್ತಿನಿಂದ ಏನೂ ಬೇಕಾಗಿಲ್ಲ. ಇದು ತನ್ನದೇ ಆದ ಶಕ್ತಿಯ ಅಗತ್ಯತೆಗಳು ಮತ್ತು ಆಹಾರ ಪೂರೈಕೆಯೊಂದಿಗೆ ಸಜ್ಜುಗೊಳಿಸಲ್ಪಡುತ್ತದೆ.
ಈ ಬಂಕರ್‌ನ ಗೇಟ್ ಅನ್ನು ಲೋಹದಿಂದ ಮಾಡಲಾಗುವುದು ಮತ್ತು ಕಾಂಕ್ರೀಟ್‌ನಿಂದ ತುಂಬಿಸಲಾಗುತ್ತದೆ. ಈ ರೀತಿಯ ವಿನ್ಯಾಸವನ್ನು ಬಂಕರ್‌ಗಳು ಮತ್ತು ಬಾಂಬ್ ಶೆಲ್ಟರ್‌ಗಳನ್ನು ತಯಾರಿಸಲು ಬಳಸಲಾಗುತ್ತದೆ.
ಮಾರ್ಕ್ ಮತ್ತು ಪ್ರಿಸ್ಸಿಲ್ಲಾ ಅವರ ಈ ಬಂಕರ್ ಕೌಯಿ ದ್ವೀಪದಲ್ಲಿದೆ. ಇದನ್ನು ಕೊಯೊಲೌ ರಾಂಚ್ ಎಂದು ಕರೆಯಲಾಗುತ್ತದೆ. ಭೂಗತ ಶೆಲ್ಟರ್ ಹೊರತುಪಡಿಸಿ, ಹತ್ತಕ್ಕೂ ಹೆಚ್ಚು ಕಟ್ಟಡಗಳನ್ನು ಅದರಲ್ಲಿ ನಿರ್ಮಿಸಲಾಗುತ್ತಿದೆ. 30 ಮಲಗುವ ಕೋಣೆಗಳು ಮತ್ತು 30 ಸ್ನಾನಗೃಹಗಳೂ ಇರಲಿವೆ. ಇದಲ್ಲದೇ ಎರಡು ಬಂಗಲೆಗಳನ್ನೂ ನಿರ್ಮಿಸಲಾಗಿದೆ.
ಚಂಡಮಾರುತಗಳ ಸಂದರ್ಭದಲ್ಲಿ ಸುರಕ್ಷಿತವಾಗಿರಲು ಇದನ್ನು ಶೆಲ್ಟರ್ ರೀತಿಯಲ್ಲಿ ಬಳಸಿಕೊಳ್ಳುವ ಸಾಧ್ಯತೆ ಇದೆ. ಅಲ್ಲಿನ ಜನರೊಂದಿಗೆ ಸಮಯ ಕಳೆಯುವ ಸಲುವಾಗಿಯೇ ಮಾರ್ಕ್ ಮತ್ತು ಪ್ರಿಸ್ಸಿಲ್ಲಾ ಈ ರೀತಿಯ ಬಂಕರ್ ಅನ್ನು ನಿರ್ಮಿಸುತ್ತಿದ್ದಾರೆ ಅಂತಾನೂ ಹೇಳಲಾಗ್ತಿದೆ.
ಈ ಹಿಂದೆ ವೆಂಚರ್ ಕ್ಯಾಪಿಟಲಿಸ್ಟ್ ಪೀಟರ್ ಥೀಲ್ ಕೂಡ 2022ರಲ್ಲಿ ಇದೇ ರೀತಿಯ ಯೋಜನೆಯನ್ನು ಮಾಡಿದ್ದರು. ಇದನ್ನು ನ್ಯೂಜಿಲೆಂಡ್‌ನ ಸ್ಥಳೀಯ ಮಂಡಳಿಯು ತಿರಸ್ಕರಿಸಿತು. ಇದರಿಂದ ಸುತ್ತಮುತ್ತಲಿನ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಹೇಳಿತ್ತು. ಇತ್ತೀಚಿನ ದಿನಗಳಲ್ಲಿ ಅನೇಕ ಶ್ರೀಮಂತರು ಪ್ರಳಯದಂತಹ ಪರಿಸ್ಥಿತಿಯಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಇಂತಹ ಭೂಗತ ಬಂಕರ್‌ಗಳನ್ನು ನಿರ್ಮಿಸಿದ್ದಾರೆ.