ಚಳಿಗಾಲದಲ್ಲಿ ಡ್ರೈಫ್ರೂಟ್‌ಗಳನ್ನು ನಿಯಮಿತವಾಗಿ ಸೇವನೆ ಮಾಡಬೇಕು. ಅನೇಕರು ಡ್ರೈಫ್ರೂಟ್ ಹಲ್ವಾವನ್ನು ಇಷ್ಟಪಡುತ್ತಾರೆ. ಇನ್ನೂ ಬೇರೆ ಬೇರೆ ವಿಧಾನಗಳನ್ನು ಅವುಗಳನ್ನು ನಾವು ಸೇವಿಸುತ್ತೇವೆ. ಚಳಿಗಾಲದಲ್ಲಿ ಡ್ರೈಫ್ರೂಟ್ ತಿನ್ನುವುದರಿಂದ ದೇಹವು ಬೆಚ್ಚಗಿರುತ್ತದೆ. ಡ್ರೈಫ್ರೂಟ್‌ಗಳಲ್ಲಿ ಖರ್ಜೂರಕ್ಕೆ ಮೊದಲ ಸ್ಥಾನ. ಆದರೆ ಚಳಿಗಾಲದಲ್ಲಿ ಇದನ್ನು ತಿನ್ನಬೇಕೆ ಅಥವಾ ಬೇಡವೇ ಎಂಬುದು ಅನೇಕರಲ್ಲಿರುವ ಗೊಂದಲ.
ಚಳಿಗಾಲದಲ್ಲಿ ಖರ್ಜೂರವನ್ನು ಸೇವಿಸುವುದರಿಂದ ದೇಹಕ್ಕೆ ಏನೆಲ್ಲಾ ಪ್ರಯೋಜನಗಳು ಸಿಗುತ್ತವೆ ಎಂಬುದನ್ನು ನೋಡೋಣ. ಇದು ಅನೇಕ ರೋಗಗಳನ್ನು ಕೂಡ ನಿಯಂತ್ರಿಸಬಲ್ಲದು. ಚಳಿಗಾಲ ಶುರುವಾಗುತ್ತಿದ್ದಂತೆಯೇ ಮಾರುಕಟ್ಟೆಯಲ್ಲಿ ಖರ್ಜೂರದ ಭರಾಟೆ ಕೂಡ ಜೋರಾಗಿರುತ್ತದೆ.
ಅಧಿಕ ರಕ್ತದೊತ್ತಡ ನಿಯಂತ್ರಣ – ಚಳಿಗಾಲದಲ್ಲಿ ಕಡಿಮೆ ತಾಪಮಾನದಿಂದಾಗಿ ರಕ್ತನಾಳಗಳು ತಾತ್ಕಾಲಿಕವಾಗಿ ಕುಗ್ಗುತ್ತವೆ. ಇದರಿಂದ ದೇಹಕ್ಕೆ ಸರಿಯಾಗಿ ರಕ್ತ ಪೂರೈಕೆಯಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ರಕ್ತದೊತ್ತಡ ಹೆಚ್ಚಾಗುತ್ತದೆ. ಚಳಿಗಾಲದಲ್ಲಿ ಅಧಿಕ ಬಿಪಿಯನ್ನು ನಿಯಂತ್ರಿಸಲು ಖರ್ಜೂರವನ್ನು ಪ್ರತಿದಿನ ಸೇವಿಸಿ. ಏಕೆಂದರೆ ಖರ್ಜೂರದಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ.
ಮಧುಮೇಹ ನಿಯಂತ್ರಣ – ಕೆಲವರಿಗೆ ಚಳಿಗಾಲದಲ್ಲಿ ಸಿಹಿತಿಂಡಿಗಳನ್ನು ತಿನ್ನಬೇಕೆಂಬ ತೀವ್ರ ಹಂಬಲವಿರುತ್ತದೆ. ಆದರೆ ಅದರಿಂದ ಶುಗರ್ ಲೆವೆಲ್ ಹೆಚ್ಚಾಗುವ ಅಪಾಯವಿರುತ್ತದೆ. ಸಕ್ಕರೆ ಕಾಯಿಲೆ ಇರುವವರು ಸಿಹಿ ತಿನ್ನಲು ಭಯಪಡುತ್ತಾರೆ. ಆದರೆ ಮಧುಮೇಹಿಗಳು ಕೂಡ ಖರ್ಜೂರವನ್ನು ಪ್ರತಿದಿನ ಮಿತವಾಗಿ ಸೇವನೆ ಮಾಡಬಹುದು. ಅದರಲ್ಲಿ ಗ್ಲೈಸೆಮಿಕ್ ಸೂಚ್ಯಂಕವು ತುಂಬಾ ಕಡಿಮೆಯಿರುವುದರಿಂದ ಅವರಿಗೂ ಪ್ರಯೋಜನಕಾರಿಯಾಗಿದೆ.
ಶೀತ ಮತ್ತು ಕೆಮ್ಮಿನಿಂದ ರಕ್ಷಣೆ – ಚಳಿಗಾಲದಲ್ಲಿ ಪ್ರತಿನಿತ್ಯ ಖರ್ಜೂರವನ್ನು ಹಾಲಿನೊಂದಿಗೆ ಸೇವಿಸಿದರೆ ಶೀತ ಮತ್ತು ಕೆಮ್ಮು ಕಡಿಮೆಯಾಗುತ್ತದೆ. ಈ ಋತುವಿನಲ್ಲಿ ಹೆಚ್ಚಿನ ಜನರು ನೆಗಡಿ ಮತ್ತು ಕೆಮ್ಮಿನಿಂದ ಬಳಲುತ್ತಾರೆ. ಖರ್ಜೂರದಲ್ಲಿರುವ ಪೋಷಕಾಂಶಗಳು ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ.