ಲಿಜಿಯಾಂಗ್: ಚೀನಾದ ಲಿಜಿಯಾಂಗ್ ಹಳೆಯ ಪಟ್ಟಣದ ಹೋಟೆಲ್‌ನಲ್ಲಿ ಲಗೇಜ್ ಕ್ಯಾರಿಯರ್ ಆಗಿ ಕೆಲಸ ಮಾಡುವ ಹಸ್ಕಿ ನಾಯಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಕೀಮಿ ಎಂಬ ಹೆಸರಿನ ಈ ನಾಯಿ ಪ್ರವಾಸಿಗರ ಲಗೇಜ್‌ಗಳನ್ನು ಅವರ ಹೋಂಸ್ಟೇಗಳಿಗೆ ತಲುಪಿಸುತ್ತದೆ.
ಇದು ತಮಾಷೆಯ ಪ್ರಯೋಗವಾಗಿ ಪ್ರಾರಂಭವಾಗಿ, ಉತ್ತಮ ವ್ಯವಹಾರವಾಗಿ ಬದಲಾಗಿದೆ, ಹೋಂಸ್ಟೇಗೆ ಹೊಸ ಅತಿಥಿಗಳನ್ನು ಕರೆತರುತ್ತಿದೆ. ಈ ನಾಯಿ ಕೇವಲ ಮೂರು ದಿನಗಳಲ್ಲಿ 23 ಲಕ್ಷ ರೂ. (USD 27,000) ಸಂಪಾದಿಸಿದೆ. ಹಕೀಮಿಯನ್ನು ಹೋಂಸ್ಟೇ ಮಾಲೀಕ ಕ್ಸು ಬೆಳೆಸಿದ್ದಾರೆ. ಆರಂಭದಲ್ಲಿ, ಸುಂದರವಾದ ಹಸ್ಕಿ ಅವನ ಸಾಕು ನಾಯಿಯಾಗಿತ್ತು. ಆದರೆ ಇದ್ದಕ್ಕಿದ್ದಂತೆ, ಹಕೀಮಿಯ ಈ ವಿಶಿಷ್ಟ ಪ್ರತಿಭೆ ಬೆಳಕಿಗೆ ಬಂದಿದೆ.
“ಹಕೀಮಿ ನಮ್ಮ ಮನೆಗೆ ಬಂದಾಗ, ಅವನು ತುಂಬಾ ಶಕ್ತಿಯುತನಾಗಿದ್ದ. ಕಳೆದ ವರ್ಷ ಏಪ್ರಿಲ್‌ನಲ್ಲಿ, ನಾನು ಅವನನ್ನು ಆಟವಾಡಲು ಕರೆದೊಯ್ದು ಟ್ರಾಲಿ ಎಳೆಯಲು ಪ್ರಯತ್ನಿಸಿದಾಗ, ಅವನು ಅದನ್ನು ತಕ್ಷಣವೇ ಕಲಿತಿದ್ದು ನನಗೆ ಆಶ್ಚರ್ಯವನ್ನುಂಟು ಮಾಡಿತು,” ಎಂದು ಕ್ಸು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌ಗೆ ತಿಳಿಸಿದರು.
ಕ್ಸು ಆರಂಭದಲ್ಲಿ ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ ಕೇವಲ ಮೋಜಿಗೆ ಪೋಸ್ಟ್ ಮಾಡಿದರು. ಆದರೆ, ಕ್ಲಿಪ್‌ಗಳು ಶೀಘ್ರದಲ್ಲೇ ಜನರ ಗಮನ ಸೆಳೆಯಲು ಪ್ರಾರಂಭಿಸಿದ್ದು, ಹಕೀಮಿಯ ಪ್ರತಿ ವೀಡಿಯೊ ಹತ್ತು ಮಿಲಿಯನ್ ವೀಕ್ಷಣೆಗಳನ್ನು ಪಡೆಯಲು ಪ್ರಾರಂಭಿಸಿತು.
ಅದರ ಉತ್ತುಂಗದಲ್ಲಿ, ನಾಯಿ ಕೇವಲ ಮೂರು ದಿನಗಳಲ್ಲಿ ಆನ್‌ಲೈನ್ ಆದಾಯದಲ್ಲಿ 200,000 ಯುವಾನ್ ಗಳಿಸಿತು.