ಸೂರ್ಯನ ಕಿರಣ ಆರೋಗ್ಯಕ್ಕೆ ಪ್ರಯೋಜನಕಾರಿ. ಇದಕ್ಕೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಮಾಹಿತಿ ಹೊರಬಿದ್ದಿದೆ. ಯುವಿ ಕಿರಣಗಳಿಗೆ ದೇಹವನ್ನು ಒಡ್ಡಿಕೊಳ್ಳುವುದರಿಂದ ವಿಟಮಿನ್-ಡಿ ಹೆಚ್ಚಾಗುತ್ತದೆ. ಇದು ಆಟೊ ಇಮ್ಯುನ್ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
ಸಂಶೋಧಕರ ಪ್ರಕಾರ, ಸೂರ್ಯನ ಬೆಳಕು ಎಲ್ಲಾ ವಯಸ್ಸಿನ ಜನರಿಗೆ ಪ್ರಯೋಜನಕಾರಿಯಾಗಿದೆ. ಸಂಶೋಧಕರು ಈ ಅಧ್ಯಯನದಲ್ಲಿ 332 ಜನರ ಮೇಲೆ ಅಧ್ಯಯನ ನಡೆಸಿದ್ದಾರೆ. ಮೂರರಿಂದ 22 ವರ್ಷ ವಯಸ್ಸಿನವರು ಅಧ್ಯಯನದಲ್ಲಿ ಪಾಲ್ಗೊಂಡಿದ್ದರು. ಇವರೆಲ್ಲ ಮಲ್ಟಿಪಲ್ ಸ್ಕ್ಲೆರೋಸಿಸ್ ಹೊಂದಿದ್ದರು. ಇವರ ಅಧ್ಯಯನದ ಜೊತೆ ಮಲ್ಟಿಪಲ್ ಸ್ಕ್ಲೆರೋಸಿಸ್ ಹೊಂದಿರದ 534 ಜನರನ್ನು ಹೋಲಿಕೆ ಮಾಡಲಾಗಿದೆ.
ಬಾಲ್ಯದಲ್ಲಿ ನೇರಳಾತೀತ ಕಿರಣಗಳು ದೇಹಕ್ಕೆ ತಾಕಿದಲ್ಲಿ ವಯಸ್ಸಾದ್ಮೇಲೆ ಮಲ್ಟಿಪಲ್ ಸ್ಕ್ಲೆರೋಸಿಸ್ ಕಾಡುವುದು ಕಡಿಮೆ. ಮಲ್ಟಿಪಲ್ ಸ್ಕ್ಲೆರೋಸಿಸ್ ನರ ಹಾನಿಯಿಂದಾಗಿ, ಮೆದುಳು ಮತ್ತು ದೇಹದ ನಡುವಿನ ಸಂಪರ್ಕದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ದೃಷ್ಟಿ ದೋಷ, ನೋವು, ಆಯಾಸ ಮುಂತಾದ ಅನೇಕ ಸಮಸ್ಯೆ ಕಾಡುತ್ತದೆ.
ಅಧ್ಯಯನದಲ್ಲಿ ಸೂರ್ಯನ ಕಿರಣಕ್ಕೆ ಎಷ್ಟು ಸಮಯ ದೇಹ ಒಡ್ಡಿದ್ದರು ಎಂಬುದನ್ನು ಕೇಳಲಾಗಿದೆ. ಪ್ರತಿದಿನ ಸರಾಸರಿ 30 ನಿಮಿಷಗಳಿಗಿಂತ ಕಡಿಮೆ ಸೂರ್ಯನ ಬೆಳಕನ್ನು ಪಡೆದವರಿಗಿಂತ ಪ್ರತಿದಿನ 30 ನಿಮಿಷದಿಂದ ಒಂದು ಗಂಟೆಯವರೆಗೆ ಸೂರ್ಯನ ಬೆಳಕನ್ನು ಪಡೆದ ಜನರಿಗೆ ಮಲ್ಟಿಪಲ್ ಸ್ಕ್ಲೆರೋಸಿಸ್ ನ ಅಪಾಯ ಶೇಕಡಾ 52 ರಷ್ಟು ಕಡಿಮೆ ಎಂಬುದು ಗೊತ್ತಾಗಿದೆ.