ಇತ್ತೀಚಿನ ದಿನಗಳಲ್ಲಿ ಬಂಜೆತನದ ಸಮಸ್ಯೆ ಹೆಚ್ಚುತ್ತಿದೆ. ಇದಕ್ಕೆ ಪ್ರಮುಖ ಕಾರಣ ರಕ್ತಹೀನತೆ. ಅನಿಮಿಯಾದಿಂದ ಕೂಡ ಮಹಿಳೆಯರು ಬಂಜೆತನಕ್ಕೆ ತುತ್ತಾಗುತ್ತಿದ್ದಾರೆ. ಈ ರಕ್ತಹೀನತೆಗೆ ಪ್ರಮುಖ ಕಾರಣವೆಂದರೆ ನಮ್ಮ ಕೆಟ್ಟ ಜೀವನಶೈಲಿ. ಇದರಿಂದಾಗಿ ಕೆಂಪು ರಕ್ತದ ಕಣಗಳು ಅಥವಾ ಹಿಮೋಗ್ಲೋಬಿನ್ ಕೊರತೆಯಾಗುತ್ತದೆ. ಇದು ಗರ್ಭಾವಸ್ಥೆಯಲ್ಲಿ ಅಥವಾ ಹೆರಿಗೆಯ ಸಮಯದಲ್ಲಿ ಮಹಿಳೆಯರಿಗೆ ತೊಂದರೆ ಉಂಟುಮಾಡುತ್ತದೆ.
ರಕ್ತಹೀನತೆಯಿಂದ ಮಹಿಳೆಯರಲ್ಲಿ ಅನೇಕ ಬಗೆಯ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಅನಿಯಮಿತ ಮುಟ್ಟು, ಅಂಡೋತ್ಪತ್ತಿ ಮತ್ತು ಗರ್ಭಧರಿಸುವಲ್ಲಿ ತೊಂದರೆಗಳಂತಹ ಸಮಸ್ಯೆಗಳು ಕಂಡುಬರುತ್ತವೆ. ಇದು ಬಂಜೆತನಕ್ಕೆ ಕಾರಣವಾಗುತ್ತದೆ.
ಆರೋಗ್ಯ ತಜ್ಞರ ಪ್ರಕಾರ ರಕ್ತಹೀನತೆಯಿಂದಾಗಿ ಮಹಿಳೆಯರಲ್ಲಿ ಕೆಂಪು ರಕ್ತ ಕಣಗಳ ಕೊರತೆಯಾಗುತ್ತದೆ. ಇದರಿಂದ ದೇಹದ ಎಲ್ಲಾ ಭಾಗಗಳಿಗೆ ಆಮ್ಲಜನಕ ತಲುಪಲು ಕಷ್ಟವಾಗುತ್ತದೆ. ಇದು ಅಂಡಾಶಯದ ಕಾರ್ಯದ ಮೇಲೆ ಸಹ ಪರಿಣಾಮ ಬೀರಬಹುದು. ಋತುಚಕ್ರದಲ್ಲೂ ಏರುಪೇರಾಗಬಹುದು. ಇವೆಲ್ಲದರ ಪರಿಣಾಮವಾಗಿ ಮಹಿಳೆಯರಲ್ಲಿ ಅಂಡೋತ್ಪತ್ತಿ ಸಂಪೂರ್ಣವಾಗಿ ನಿಲ್ಲಬಹುದು. ಇದರಿಂದಾಗಿ ಗರ್ಭಧರಿಸುವಲ್ಲಿ ತೊಂದರೆಗಳಾಗುತ್ತವೆ.
ರಕ್ತಹೀನತೆಯಿಂದ ಗರ್ಭಿಣಿಯರಲ್ಲಿ ಕೂಡ ಅನೇಕ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಹೆರಿಗೆಯ ಸಮಯದಲ್ಲಿ ಸಮಸ್ಯೆ ಹಾಗೂ ಗರ್ಭಪಾತವಾಗುವ ಅಪಾಯವೂ ಇದೆ. ರಕ್ತಹೀನತೆಯ ಎಲ್ಲಾ ಪ್ರಕರಣಗಳು ಕೇವಲ ಪೋಷಣೆಗೆ ಸಂಬಂಧಿಸಿಲ್ಲ. ಹಿಮೋಗ್ಲೋಬಿನೋಪತಿ, ಕೆಂಪು ರಕ್ತ ಕಣಗಳ ಅಸ್ವಸ್ಥತೆಗಳು, ಆಟೋಇಮ್ಯೂನ್ ಹಿಮೋಲಿಟಿಕ್ ಅನೀಮಿಯಾ, ಹೈಪೋಥೈರಾಯ್ಡಿಸಮ್ ಮತ್ತು ಇತರ ತೊಂದರೆಗಳಿಗೂ ಇದು ಕಾರಣವಾಗುತ್ತದೆ. ಇವುಗಳಿಗೆ ಚಿಕಿತ್ಸೆ ಮತ್ತು ಮುನ್ನೆಚ್ಚರಿಕೆಗಳ ಅಗತ್ಯವಿರುತ್ತದೆ.
ರಕ್ತಹೀನತೆ ಪರಿಹಾರವೇನು ?
ರಕ್ತಹೀನತೆಯನ್ನು ತಡೆಗಟ್ಟಲು ಕಬ್ಬಿಣದ ಅಂಶಗಳಿರುವ ಆಹಾರವನ್ನು ಸೇವಿಸಬೇಕು. ಮಾಂಸ, ಕೋಳಿ, ಮೀನು, ಬೀನ್ಸ್, ಮಸೂರ್ ದಾಲ್, ತೋಫು, ಪಾಲಕ್ ಸೊಪ್ಪು, ಬಾಳೆಕಾಯಿ, ಬಲವರ್ಧಿತ ಧಾನ್ಯಗಳು ಮತ್ತು ನಟ್ಸ್, ಸೀಡ್ಸ್ ಸೇವಿಸಬೇಕು. ಇದಲ್ಲದೆ ಸಿಟ್ರಸ್ ಹಣ್ಣುಗಳು, ಟೊಮ್ಯಾಟೊ ಮತ್ತು ಕ್ಯಾಪ್ಸಿಕಂನಂತಹ ವಿಟಮಿನ್ ಸಿ ಮೂಲಗಳೊಂದಿಗೆ ಕಬ್ಬಿಣದ ಸಮೃದ್ಧ ಆಹಾರಗಳನ್ನು ಸಂಯೋಜಿಸುವುದು ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ.
ರಕ್ತಹೀನತೆಯನ್ನು ತಪ್ಪಿಸಲು ಬಯಸಿದರೆ ಆಹಾರದಲ್ಲಿ ಕಬ್ಬಿಣದ ಅಂಶದ ಜೊತೆಗೆ ವಿಟಮಿನ್ ಬಿ 12, ಫೋಲಿಕ್ ಆಮ್ಲದಂತಹ ಪೋಷಕಾಂಶಗಳನ್ನು ಸೇರಿಸಿ. ಪಿಸಿಓಡಿ, ಪಿರಿಯಡ್ಸ್ ಸಮಯದಲ್ಲಿ ಅತಿಯಾದ ರಕ್ತಸ್ರಾವ ಅಥವಾ ಆಟೋಇಮ್ಯೂನ್ ಕಾಯಿಲೆ ಕೂಡ ರಕ್ತಹೀನತೆಗೆ ಕಾರಣವಾಗಬಹುದು. ಆದ್ದರಿಂದ ಇವುಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
ರಕ್ತಹೀನತೆಯಿಂದ ಗರ್ಭಧರಿಸುವಲ್ಲಿ ತೊಂದರೆಗಳಾದರೆ ಯಾವುದೇ ಹಿಂಜರಿಕೆಯಿಲ್ಲದೆ ವೈದ್ಯರನ್ನು ಸಂಪರ್ಕಿಸಿ ಮತ್ತು ಫರ್ಟಿಲಿಟಿ ಟ್ರೀಟ್ಮೆಂಟ್ ಪಡೆಯಿರಿ. ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಿ, ಸಾಕಷ್ಟು ನಿದ್ರೆ ಮಾಡಿ, ಒತ್ತಡವನ್ನು ಕಡಿಮೆ ಮಾಡಿ, ವಿಶ್ರಾಂತಿ ತೆಗೆದುಕೊಳ್ಳಿ.