ತೂಕವನ್ನು ಕಡಿಮೆ ಮಾಡಿಕೊಳ್ಳಲು ಪ್ರತಿದಿನ ವ್ಯಾಯಾಮದ ಜೊತೆಗೆ ಆರೋಗ್ಯಕರ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಇದಕ್ಕಾಗಿ ಕೆಲವೊಂದು ಡಿಟಾಕ್ಸ್ ಡ್ರಿಂಕ್ ಅಥವಾ ಸ್ಮೂಥಿಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು. ವಿಶೇಷವಾಗಿ ಸೌತೆಕಾಯಿ ಮತ್ತು ಕೊತ್ತಂಬರಿ ಸೊಪ್ಪಿನಿಂದ ತಯಾರಿಸಿದ ಪಾನೀಯ ತೂಕವನ್ನು ಕಡಿಮೆ ಮಾಡಲು ಬಹಳ ಸಹಾಯಕವಾಗಿದೆ.
ಇದನ್ನು ಕುಡಿದರೆ ನಿಮ್ಮ ಹೊಟ್ಟೆ ದೀರ್ಘಕಾಲದವರೆಗೆ ತುಂಬಿರುತ್ತದೆ. ಇದರಿಂದ ನಿಮಗೆ ಹಸಿವಾಗುವುದಿಲ್ಲ. ಅತಿಯಾಗಿ ತಿನ್ನುವುದನ್ನು ತಪ್ಪಿಸಬಹುದು. ಪರಿಣಾಮ ದೇಹದ ತೂಕವೂ ಕಡಿಮೆಯಾಗುತ್ತದೆ. ಬೇಸಿಗೆಯಲ್ಲಿ ಸೌತೆಕಾಯಿ ಸೇವನೆ ಅತ್ಯಗತ್ಯ. ಇದು ನಮ್ಮ ದೇಹವನ್ನು ಹೈಡ್ರೇಟ್ ಆಗಿಡಲು ಸಹಾಯ ಮಾಡುತ್ತದೆ. ಕೊತ್ತಂಬರಿ ಸೊಪ್ಪು ಹೊಟ್ಟೆಯನ್ನು ತಂಪಾಗಿಸುತ್ತದೆ.
ಸೌತೆಕಾಯಿ ಹಾಗೂ ಕೊತ್ತಂಬರಿ ಸೊಪ್ಪಿನಲ್ಲಿ ಕ್ಯಾಲೋರಿ ಕಡಿಮೆ ಇದೆ. ಹಾಗಾಗಿ ಸಹಜವಾಗಿಯೇ ತೂಕ ಹೆಚ್ಚಾಗುವ ಅಪಾಯವಿರುವುದಿಲ್ಲ. ಈ ಡಿಟಾಕ್ಸ್ ಪಾನೀಯವನ್ನು ಹೇಗೆ ತಯಾರಿಸಬಹುದು ಅನ್ನೋದನ್ನು ನೋಡೋಣ.
2 ಸೌತೆಕಾಯಿ, ಒಂದು ಕಪ್ ನಷ್ಟು ಹೆಚ್ಚಿದ ಕೊತ್ತಂಬರಿ ಸೊಪ್ಪು, ರುಚಿಗೆ ಉಪ್ಪು, ಒಂದು ಚಿಟಿಕೆ ಕಾಳುಮೆಣಸಿನ ಪುಡಿಯನ್ನು ತೆಗೆದುಕೊಳ್ಳಿ. ಮೊದಲು ಸೌತೆಕಾಯಿಯನ್ನು ಚೆನ್ನಾಗಿ ತೊಳೆದು ಕತ್ತರಿಸಿ. ಮಿಕ್ಸರ್ ಗ್ರೈಂಡರ್ ಜಾರ್‌ಗೆ ಕೊತ್ತಂಬರಿ ಸೊಪ್ಪು ಮತ್ತು ಸೌತೆಕಾಯಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಈ ರಸವನ್ನು ಲೋಟಕ್ಕೆ ಹಾಕಿ ಅದಕ್ಕೆ ರುಚಿಗೆ ತಕ್ಕಂತೆ ಉಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಸೇರಿಸಿ. ರುಚಿಕರವಾದ ಪಾನೀಯ ಸಿದ್ಧವಾಗುತ್ತದೆ.
ಸೌತೆಕಾಯಿಯಲ್ಲಿ ನಾರಿನಂಶ ಹೇರಳವಾಗಿದೆ, ಹಾಗಾಗಿ ಇದನ್ನು ಸೇವಿಸಿದಾಗ ಹೊಟ್ಟೆ ತುಂಬಿದಂತೆ ಭಾಸವಾಗುತ್ತದೆ. ಈ ಪಾನೀಯ ದೇಹವನ್ನು ದೀರ್ಘಕಾಲದವರೆಗೆ ಹೈಡ್ರೇಟ್ ಆಗಿ ಇಡುತ್ತದೆ. ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹ ಇದು ಸಹಾಯ ಮಾಡಬಲ್ಲದು. ಅಷ್ಟೇ ಅಲ್ಲ ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸುವಲ್ಲಿ ತುಂಬಾ ಪರಿಣಾಮಕಾರಿಯಾಗಿದೆ.