ಮೊಬೈಲ್ ಫೋನ್ ಬಳಸುವ ಬಹಳಷ್ಟು ಮಂದಿ ಇಯರ್ ಫೋನುಗಳನ್ನು ಉಪಯೋಗಿಸುತ್ತಾರೆ. ಕೇವಲ ಮೊಬೈಲ್ ಫೋನಿಗೆ ಮಾತ್ರವಲ್ಲ ಐ ಪ್ಯಾಡ್ ಮೂಲಕ ಹಾಡು ಕೇಳಲೂ ಇದನ್ನೇ ಬಳಸುತ್ತಾರೆ. ಆದರೆ ಇದನ್ನು ನಿರಂತರವಾಗಿ ಬಳಸಿದರೆ ಆಪಾಯ ಎಂಬುದು ವೈದ್ಯರ ಎಚ್ಚರಿಕೆ.
ಇಯರ್ ಫೋನಿನ ಮೂಲಕ ಧ್ವನಿ ತರಂಗಾಂತರಗಳು ನೇರವಾಗಿ ಕಿವಿಗೆ ಅಪ್ಪಳಿಸುತ್ತವೆ. ಇದರ ಧ್ವನಿ 90 ಡೆಸಿಬಲ್ಸ್ ಗಳಿಗಿಂತ ಹೆಚ್ಚಿದ್ದರೆ ಕಿವಿಗೆ ತೊಂದರೆಯಾಗುತ್ತದೆ. ಅಲ್ಲದೇ ಸತತವಾಗಿ 15 ನಿಮಿಷಗಳಿಗಿಂತ ಹೆಚ್ಚು ಬಳಸಿದರೆ ಮುಂದೆ ಕಿವಿ ಮಂದವಾಗುವ ಸಾಧ್ಯತೆ ಹೆಚ್ಚು ಎಂಬುದು ತಜ್ಞ ವೈದ್ಯರ ಅಭಿಪ್ರಾಯ.
ಇದಿಷ್ಟೇ ಅಲ್ಲ. ಒಬ್ಬರು ಉಪಯೋಗಿಸಿದ ಇಯರ್ ಫೋನನ್ನು ಮತ್ತೊಬ್ಬರು ಬಳಸಿದರೆ ಬ್ಯಾಕ್ಟೀರಿಯಾಗಳು ಒಬ್ಬರಿಂದ ಮತ್ತೊಬ್ಬರಿಗೆ ವರ್ಗಾವಣೆಯಾಗುತ್ತದೆ ಎನ್ನುತ್ತಾರೆ ವೈದ್ಯರು. ಹಾಗಾಗಿ ಒಬ್ಬರು ಬಳಸುವ ಇಯರ್ ಫೋನನ್ನು ಮತ್ತೊಬ್ಬರು ಬಳಸದಿರುವುದು ಸೂಕ್ತ ಎಂಬುದು ಇವರ ಸಲಹೆ.
ಇಯರ್ ಫೋನ್ ಅಥವಾ ಹೆಡ್ ಫೋನುಗಳು ಎಲೆಕ್ಟ್ರೋ ಮ್ಯಾಗ್ನೆಟಿಕ್ ತರಂಗಗಳನ್ನು ಸೂಸುವ ಕಾರಣ, ಮೆದುಳಿನ ಮೇಲೂ ಇದು ಪ್ರಭಾವ ಬೀರುತ್ತದೆ ಎನ್ನಲಾಗಿದೆ. ಮನುಷ್ಯನಿಗೆ ಕಣ್ಣು, ಮೂಗಿನಷ್ಟೇ ಕಿವಿಯೂ ಮುಖ್ಯ. ಕಿವಿ ಮಂದವಾಗಿ ಕೇಳಿಸುವುದು, ಕಿವಿ ನೋವು ಮೊದಲಾದವು ಕಂಡು ಬಂದರೆ ಕೂಡಲೇ ವೈದ್ಯರನ್ನು ಕಾಣುವುದು ಕ್ಷೇಮ.