ಕೊರೋನಾ ನಂತರ ಕೆಲಸದ ರೀತಿಯಲ್ಲಿ ಅನೇಕ ಬದಲಾವಣೆಯಾಗಿವೆ. ಉದ್ಯೋಗಿಗಳು ಕಚೇರಿಯಲ್ಲಿ ಮಾತ್ರವಲ್ಲದೇ ವರ್ಕ್ ಫ್ರಂ ಹೋಂ ಮಾಡಲು ಅವಕಾಶ ಸಿಕ್ಕಿದೆ. ಈಗಾಗಲೇ ಅನೇಕ ಕಂಪನಿಗಳು ವರ್ಕ್ ಫ್ರಂ ಹೋಂ ಅನ್ನು ಕೆಲಸದ ಭಾಗವಾಗಿಸಿಕೊಂಡಿವೆ.
ಕೆಲವು ಕಂಪನಿಗಳು ಕಚೇರಿಯಿಂದ ಕಾರ್ಯನಿರ್ವಹಿಸುವಂತೆಯೇ ಮನೆಯಿಂದಲೂ ಕೆಲಸ ಮಾಡಲು ಅವಕಾಶ ಕಲ್ಪಿಸಿವೆ. ಆದರೆ, ನೆದರ್ ಲ್ಯಾಂಡ್ ವರ್ಕ್ ಫ್ರಂ ಹೋಂ ಅನ್ನು ಉದ್ಯೋಗಿಗಳ ಹಕ್ಕು ಎಂದು ಕಾನೂನನ್ನೇ ರೂಪಿಸಿದೆ.
ಹೆಚ್ಚಿನ ಕಾರ್ಮಿಕರು ಮನೆಯಿಂದ ಕೆಲಸ ಮಾಡಲು ಬಯಸಬಹುದು ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ. ಅನೇಕ ದೇಶಗಳಲ್ಲಿ ಉದ್ಯೋಗಿಗಳನ್ನು ಕಚೇರಿಗೆ ಕರೆಸಿಕೊಳ್ಳಬೇಕೆ, ಬೇಡವೇ ಎಂಬ ಚರ್ಚೆ ನಡೆದಿದೆ. ಕೆಲವು ಕಂಪನಿಗಳು ಕಚೇರಿಯಿಂದ, ಮತ್ತೆ ಕೆಲವು ಕಂಪನಿಗಳು ಮನೆಯಿಂದ, ಇನ್ನೊಂದಿಷ್ಟು ಕಂಪನಿಗಳು ಎರಡೂ ಕಡೆಯಿಂದಲೂ ಕೆಲಸ ಮಾಡಲು ಅವಕಾಶ ನೀಡಿವೆ.
ಈ ನಡುವೆ ನೆದರ್ಲ್ಯಾಂಡ್ಸ್ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ನಿರ್ವಹಿಸುವುದನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡುವ ಬಗ್ಗೆ ಚಿಂತಿಸುತ್ತಿದೆ ಎಂದು ವರದಿಯಾಗಿದೆ. ಕಳೆದ ವಾರ, ಡಚ್ ಸಂಸತ್ತಿನ ಕೆಳಮನೆಯು ಈ ನಿಟ್ಟಿನಲ್ಲಿ ಶಾಸನವನ್ನು ಅಂಗೀಕರಿಸಿದೆ. ಸೆನೆಟ್ ನಿಂದ ಅನುಮೋದನೆ ಕೂಡ ಆಗಿದೆ.
ಪ್ರಸ್ತುತ, ನೆದರ್ ಲ್ಯಾಂಡ್ ನ ಉದ್ಯೋಗದಾತರು ಯಾವುದೇ ಕಾರಣ ನೀಡದೆ ಮನೆಯಿಂದಲೇ ಕೆಲಸ ಮಾಡುವ ಕುರಿತು ಕಾರ್ಮಿಕರ ಯಾವುದೇ ವಿನಂತಿಯನ್ನು ನಿರಾಕರಿಸಬಹುದು. ಹೊಸ ಕಾನೂನಿನ ಅಡಿಯಲ್ಲಿ, ಉದ್ಯೋಗದಾತರು ಅಂತಹ ಎಲ್ಲಾ ಮನವಿಗಳನ್ನು ಪರಿಗಣಿಸಬೇಕಿದೆ. ಮನೆಯಿಂದಲೇ ಕೆಲಸ ಮಾಡಲು ಅವಕಾಶ ನಿರಾಕರಿಸಿದಲ್ಲಿ ಅದಕ್ಕೆ ಸಾಕಷ್ಟು ಕಾರಣಗಳನ್ನು ಕೂಡ ನೀಡಬೇಕಿದೆ.