ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ಹಗರಣಗಳ ಸುಳಿಯಲ್ಲಿ ಸಿಲುಕಿದ್ದಾರೆ. ಅಕ್ರಮ ಗಣಿಗಾರಿಕೆ, ಭೂ ಹಗರಣ, ಕಲ್ಲಿದ್ದಲು ಗಣಿಗಾರಿಕೆ ಹೀಗೆ ಅನೇಕ ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯದ ಕೆಂಗಣ್ಣಿಗೆ ಗುರಿಯಾಗಿರೋ ಹೇಮಂತ್ ಸೊರೇನ್ ಸಿಎಂ ಹುದ್ದೆಯನ್ನು ಕಳೆದುಕೊಳ್ಳೋ ಸಾಧ್ಯತೆಗಳಿವೆ. ಹಾಗಾಗಿ ಹೇಮಂತ್ ಸೊರೇನ್ ಅವರ ಪತ್ನಿ ಕಲ್ಪನಾ ಸೊರೇನ್ ರಾಜ್ಯದ ನೂತನ ಸಿಎಂ ಆಗಿ ಜವಾಬ್ದಾರಿ ವಹಿಸಿಕೊಳ್ಳಬಹುದು.
ವರದಿಗಳ ಪ್ರಕಾರ ಈಗಾಗ್ಲೇ ಹೇಮಂತ್ ಸೊರೇನ್, ತಮ್ಮ ಪತ್ನಿ ಕಲ್ಪನಾರನ್ನು ಬ್ಯಾಕಪ್ ಆಗಿ ಸಿದ್ಧಗೊಳಿಸಿದ್ದಾರೆ. ಸದ್ಯ ಜಾರ್ಖಂಡ್‌ನಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ), ಕಾಂಗ್ರೆಸ್ ಮತ್ತು ಆರ್‌ಜೆಡಿ ಸಮ್ಮಿಶ್ರ ಸರ್ಕಾರ ನಡೆಸುತ್ತಿವೆ. ರಾಜಕೀಯ ಗೊಂದಲದ ಬಗ್ಗೆ ಸೋರೆನ್ ಈಗಾಗ್ಲೇ ಕಾಂಗ್ರೆಸ್ ಮತ್ತು ಆರ್‌ಜೆಡಿ ಶಾಸಕರಿಗೆ ಮಾಹಿತಿ ನೀಡಿದ್ದಾರಂತೆ. ಯಾವುದೇ ಸಮಯದಲ್ಲಿ ಹುದ್ದೆಯನ್ನು ತೊರೆದು ತಮ್ಮ ಪತ್ನಿ ಕಲ್ಪನಾ ಸೊರೆನ್‌ಗೆ ರಾಜ್ಯದ ಆಡಳಿತವನ್ನು ಅವರು ಹಸ್ತಾಂತರಿಸಬಹುದು.
43 ವರ್ಷದ ಕಲ್ಪನಾ ಸೊರೇನ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಜೊತೆಗೆ ಎಂಬಿಎ ಕೂಡ ಮಾಡಿದ್ದಾರೆ. 2019ರಲ್ಲಿ ಚುನಾವಣಾ ಆಯೋಗಕ್ಕೆ ನೀಡಿದ ಮಾಹಿತಿಯ ಪ್ರಕಾರ ಹೇಮಂತ್ ಸೋರೆನ್ ಅವರ ಪತ್ನಿ ಕಲ್ಪನಾ ಸೊರೇನ್ ಸುಮಾರು 5 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಮುಖ್ಯಮಂತ್ರಿ ಸೊರೇನ್ ಅವರ ಬಳಿ 8,51,74,195 ರೂಪಾಯಿ ಮೌಲ್ಯದ ಆಸ್ತಿಯಿದೆ.
ಕಲ್ಪನಾ ಸೊರೇನ್, ಒಡಿಶಾದ ಮಯೂರ್‌ಭಂಜ್ ಮೂಲದವರು. 2006ರಲ್ಲಿ ಹೇಮಂತ್ ಸೊರೇನ್‌ರನ್ನು ಕಲ್ಪನಾ ವಿವಾಹವಾದರು. ದಂಪತಿಗೆ ನಿಖಿಲ್ ಮತ್ತು ಅಂಶ್ ಎಂಬ ಇಬ್ಬರು ಮಕ್ಕಳಿದ್ದಾರೆ. ಬುಡಕಟ್ಟು ಸಮುದಾಯದ ಹಕ್ಕುಗಳಿಗಾಗಿ ಕಲ್ಪನಾ ಅನೇಕ ಬಾರಿ ಧ್ವನಿಯೆತ್ತಿದ್ದಾರೆ. ಈ ಮೊದಲು ಕಲ್ಪನಾ ರಾಜಕೀಯದಲ್ಲಿ ಸಕ್ರಿಯವಾಗಿರಲಿಲ್ಲ. ಸಾವಯವ ಕೃಷಿಯಲ್ಲಿ ಆಸಕ್ತಿ ಹೊಂದಿದ್ದಾರೆ. ಅಷ್ಟೇ ಅಲ್ಲ ಶಾಲೆಯೊಂದನ್ನು ನಡೆಸುತ್ತಿದ್ದಾರೆ. ಅವರ ಹೆಸರಿನಲ್ಲಿ ಮೂರು ವಾಣಿಜ್ಯ ಕಟ್ಟಡಗಳೂ ಇವೆ.