ಬೆಂಗಳೂರು: ರಾಜ್ಯದ ವಿವಿಧಡೆ ಮುಂಗಾರು ಅಬ್ಬರ ಜೋರಾಗಿದ್ದು, ಮಂಗಳೂರು, ಬೆಂಗಳೂರು, ಕಾರವಾರ, ಚಿಕ್ಕಮಗಳೂರು ಸೇರಿದಂತೆ ಹಲವು ಕಡೆ ಧಾರಾಕಾರ ಮಳೆಯಾಗಿದೆ.
ಕರಾವಳಿ ನಗರ ಮಂಗಳೂರಿನಲ್ಲಿ ಇಂದು 114 ಮಿ.ಮೀ. ಮಳೆಯಾಗಿದ್ದು, ಜುಲೈ 3ರಂದು ಭಾರತದಲ್ಲಿ ಅತಿ ಹೆಚ್ಚು ಮಳೆ ಪಡೆದ ನಗರ ಮಂಗಳೂರು ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೇಟ್ ಮಾಹಿತಿ ನೀಡಿದೆ.
ಕರ್ನಾಟಕದ ಮಂಗಳೂರಿನಲ್ಲಿ 114 ಮಿ.ಮೀ. ಮಳೆ ದಾಖಲಾಗಿದ್ದು, ಇಂದು ಭಾರತದ ಅತ್ಯಂತ ಅರ್ದ್ರ ಸ್ಥಳಗಳಲ್ಲಿ ಒಂದಾಗಿದೆ. ಹೊನ್ನಾವರದಲ್ಲಿ 78 ಮಿಮೀ, ಕಾರವಾರದಲ್ಲಿ 76 ಮಿಲಿ ಮೀಟರ್ ಮಳೆಯಾಗಿದೆ.
ಮಂಗಳೂರಿನಲ್ಲಿ ಸತತ ಎರಡು ಗಂಟೆಯಿಂದ ಧಾರಾಕಾರ ಮಳೆಯಾಗಿದೆ. ಪಂಪ್ ವೆಲ್ ಫ್ಲೈ ಓವರ್ ಕೆಳಭಾಗ ಸಂಪೂರ್ಣ ಜಲಾವೃತಗೊಂಡಿದೆ. ರಸ್ತೆ ಜಲಾವೃತಗೊಂಡ ಹಿನ್ನಲೆಯಲ್ಲಿ ಸವಾರರು ಪರದಾಟ ನಡೆಸಿದ್ದು, ಟ್ರಾಫಿಕ್ ಜಾಮ್ ಉಂಟಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಹಲವು ಧಾರಾಕಾರ ಮಳೆಯಾಗಿದೆ. ಮೂಡಿಗೆರೆ ತಾಲೂಕಿನ ಬಣಕಲ್, ಚಾರ್ಮಾಡಿ ಘಾಟ್, ಕೊಟ್ಟಿಗೆಹಾರ, ಶೃಂಗೇರಿ, ಕಳಸ, ಎನ್ಆರ್ ಪುರ ತಾಲೂಕಿನ ಹಲವು ಕಡೆ ವರುಣನ ಆರ್ಭಟ ಮುಂದುವರೆದಿದೆ.
ಬೆಂಗಳೂರು ನಗರದ ಹಲವಡೆ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ. ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಬನ್ನೇರುಘಟ್ಟ, ಜಿಗಣಿ, ಚಂದಾಪುರ, ಅತ್ತಿಬೆಲೆ ಸೇರಿದಂತೆ ಹಲವು ಕಡೆ ವರುಣನ ಅಬ್ಬರ ಉಂಟಾಗಿದೆ. ಭಾರಿ ಮಳೆಗೆ ಬನ್ನೇರುಘಟ್ಟ ಪಾರ್ಕ್ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಬನ್ನೇರುಘಟ್ಟ ಪಾರ್ಕ್ ನೋಡಲು ಬಂದಿದ್ದ ಪ್ರವಾಸಿಗರು ಪರದಾಟ ನಡೆಸಿದ್ದಾರೆ.