ಬೆಂಗಳೂರು: ಬೆಂಗಳೂರಿನ ಕ್ಯಾಬ್ ಚಾಲಕನೊಬ್ಬ ಪ್ರಯಾಣಿಕರೊಂದಿಗೆ ಸಂಸ್ಕೃತದಲ್ಲಿ ಸಂಭಾಷಿಸುತ್ತಿರುವ ವಿಡಿಯೋ ಇತ್ತೀಚೆಗೆ ಅಂತರ್ಜಾಲದಲ್ಲಿ ಅಚ್ಚರಿ ಮೂಡಿಸಿದೆ. ಬೆಂಗಳೂರಿನ ಕ್ಯಾಬ್ ಡ್ರೈವರ್, ಸಂಸ್ಕೃತ ಭಾಷೆಯ ಜ್ಞಾನದಿಂದ ಅನೇಕರನ್ನು ಬೆರಗುಗೊಳಿಸಿದ್ದಾನೆ.
ದೇಶದಲ್ಲಿ ಹಿಂದಿ ಅಥವಾ ಇಂಗ್ಲಿಷ್‌ನಂತಹ ಭಾಷೆಗಳಲ್ಲಿ ಎಲ್ಲರೂ ಹೆಚ್ಚಾಗಿ ಸಂವಹನ ನಡೆಸುತ್ತಿರುವ ಈ ಸಮಯದಲ್ಲಿ, ಕ್ಯಾಬ್ ಡ್ರೈವರ್ ಸಂಸ್ಕೃತದಲ್ಲಿ ಪ್ರಯಾಣಿಕರೊಂದಿಗೆ ನಿರರ್ಗಳವಾಗಿ ಸಂಭಾಷಣೆ ನಡೆಸುವುದು ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದೆ.
ಈ ವಿಡಿಯೋವನ್ನು ಗಿರೀಶ್ ಭಾರದ್ವಾಜ ಎಂಬ ಉದ್ಯಮಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 45 ಸೆಕೆಂಡುಗಳ ಈ ವಿಡಿಯೋದಲ್ಲಿ ಕ್ಯಾಬ್ ಡ್ರೈವರ್ ತನ್ನ ಹೆಸರು, ಸಂಸ್ಕೃತವನ್ನು ಎಲ್ಲಿ ಕಲಿತಿರುವುದು ಸೇರಿದಂತೆ ಕೆಲ ಪ್ರಶ್ನೆಗಳಿಗೆ ಸಂಸ್ಕೃತದಲ್ಲಿ ಉತ್ತರಿಸುವುದನ್ನು ನೋಡಬಹುದು.
ವಿಡಿಯೋವನ್ನು ಶೇರ್ ಮಾಡುವುದರೊಂದಿಗೆ ಗಿರೀಶ್, “ಬೆಂಗಳೂರಿನಲ್ಲಿ ಸಂಸ್ಕೃತ ಮಾತನಾಡುವ ಕ್ಯಾಬ್ ಡ್ರೈವರ್” ಎಂದು ಟ್ವೀಟ್ ಮಾಡಿದ್ದಾರೆ.
ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಪ್ರಯಾಣಿಕರು ಸಂಸ್ಕೃತದಲ್ಲಿ ಸಂಭಾಷಣೆಯನ್ನು ಆರಂಭಿಸುವುದು ನೋಡಬಹುದು. ಅವರ ಪ್ರಶ್ನೆಗಳಿಗೆ ಕ್ಯಾಬ್ ಡ್ರೈವರ್ ಅದೇ ಭಾಷೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಇದರಿಂದ ಪ್ರಭಾವಿತನಾದ ಪ್ರಯಾಣಿಕ, ರೆಕಾರ್ಡ್ ಮಾಡಲು ಪ್ರಾರಂಭಿಸಿದ್ದು ನಂತರ ಅದನ್ನು ಶೇರ್ ಮಾಡಿಕೊಂಡಿದ್ದಾರೆ.
ಇಲ್ಲಿಯವರೆಗೆ, ವೀಡಿಯೊ 82 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. 2,500 ಕ್ಕೂ ಹೆಚ್ಚು ಮಂದಿ ಇದನ್ನು ಮರುಟ್ವೀಟ್ ಮಾಡಿಕೊಂಡಿದ್ದು, ಶ್ಲಾಘನೆಗಳ ಸುರಿಮಳೆಯನ್ನೇ ಗೈದಿದ್ದಾರೆ.