ಜಂಕ್ ಫುಡ್ ತಿಂದ್ರೆ ಮಕ್ಕಳು ದಪ್ಪಗಾಗ್ತಾರೆ, ಬೊಜ್ಜು ಬರುತ್ತದೆ ಅನ್ನೋ ಭಾವನೆ ಎಲ್ಲರಲ್ಲೂ ಇದೆ. ಆದ್ರೆ ಈ ರೀತಿ ಬೊಜ್ಜು ಬೆಳೆಯಲು ಕೇವಲ ಜಂಕ್ ಫುಡ್ ಮಾತ್ರ ಕಾರಣವಲ್ಲ, ಟಿವಿ ಕೂಡ ಈ ಸಮಸ್ಯೆಯ ಮೂಲ ಅನ್ನೋದು ಬೆಳಕಿಗೆ ಬಂದಿದೆ. ಅತಿಯಾಗಿ ಟಿವಿ ನೋಡುವುದರಿಂದ್ಲೂ ಬೊಜ್ಜಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಅನ್ನೋದು ಸಂಶೋಧನೆಯಲ್ಲಿ ಸ್ಪಷ್ಟವಾಗಿದೆ.
ಮಕ್ಕಳ ದೈಹಿಕ ಚಟುವಟಿಕೆ, ದೂರದರ್ಶನ ವೀಕ್ಷಿಸುವ ಸಮಯ, ನಿದ್ರೆಯ ಸಮಯ, ಸಸ್ಯ ಆಧಾರಿತ ಆಹಾರ ಸೇವನೆ ಮತ್ತು ಅಲ್ಟ್ರಾ-ಸಂಸ್ಕರಿಸಿದ ಆಹಾರ ಸೇವನೆ ಒಳಗೊಂಡಂತೆ 5 ಅಭ್ಯಾಸಗಳನ್ನು ವಿಶ್ಲೇಷಿಸಿದ ನಂತರ ವಿಜ್ಞಾನಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ.
ನಿಮ್ಮ ಮಕ್ಕಳು ಹೆಚ್ಚು ಸಕ್ರಿಯವಾಗಿರದಿದ್ದರೆ ಮತ್ತು ನಾಲ್ಕು ವರ್ಷ ವಯಸ್ಸಿನಲ್ಲೇ ದೂರದರ್ಶನದ ಮುಂದೆ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದರೆ ಇತರರಿಗಿಂತ ಬೇಗ ಬೊಜ್ಜು ಬರುವ ಸಾಧ್ಯತೆ ಇರುತ್ತದೆ. ಇದಲ್ಲದೆ ಮೆಟಾಬಾಲಿಕ್ ಸಿಂಡ್ರೋಮ್ ಕೂಡ ಕಾಣಿಸಿಕೊಳ್ಳಬಹುದು.
ರೋಗ ನಿರೋಧಕ ಕೋಶಗಳೊಂದಿಗೆ ಕರುಳಿನ ಬ್ಯಾಕ್ಟೀರಿಯಾದ ಪರಸ್ಪರ ಕ್ರಿಯೆಯು ಬಾಲ್ಯದ ಸ್ಥೂಲಕಾಯತೆಗೆ ಒಂದು ಕಾರಣ. ಜಡ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಸೇವನೆಯು ಕೂಡ ಒಬೆಸಿಟಿಗೆ ಕಾರಣವಾಗುತ್ತದೆ. ಆದ್ರೀಗ ಬಾಲ್ಯದಲ್ಲೇ ಕಾಡುತ್ತಿರುವ ಬೊಜ್ಜು ಬಹುತೇಕ ಎಲ್ಲಾ ರಾಷ್ಟ್ರಗಳಲ್ಲೂ ಬಹುದೊಡ್ಡ ಸಮಸ್ಯೆಯಾಗಿದೆ.
ಹಾಗಾಗಿ ನಿಮ್ಮ ಮಗುವನ್ನು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವಂತೆ ನೋಡಿಕೊಳ್ಳಿ. ಅತಿಯಾಗಿ ಟಿವಿ ವೀಕ್ಷಣೆಗೆ ಅವಕಾಶ ಕೊಡಬೇಡಿ. ಮಗು ಸದಾ ಕ್ರಿಯಾಶೀಲವಾಗಿರಲಿ. ಆರೋಗ್ಯಕರ ಆಹಾರದ ಮಹತ್ವವನ್ನು ತಿಳಿಸಿ ಹೇಳಿ. ಇತರ ಮಕ್ಕಳೊಂದಿಗೆ ಆಟವಾಡಲು ಪ್ರೇರೇಪಿಸಿ.