ಆಸ್ಟ್ರೇಲಿಯನ್ ಸಂಸ್ಥೆಯೊಂದರ ಬಾಸ್ ಉದ್ಯೋಗಿಗಳನ್ನು ಶಾರ್ಟ್‌ಲಿಸ್ಟ್ ಮಾಡಲು ಹೊಸ ತಂತ್ರವನ್ನು ರೂಪಿಸಿದ್ದಾರೆ. ಅವರ ಬಯೋಡೇಟಾ ನೋಡುವ ಬದಲು ಕಾಫಿ ಕಪ್ನೊಂದಿಗೆ ಹೇಗೆ ವ್ಯವಹರಿಸುತ್ತಾರೆ ಎಂದು ಪರೀಕ್ಷೆ ಮಾಡಿದ್ದಾರೆ.
ಇಂಥದ್ದೊಂದು ಪರೀಕ್ಷೆ ಮಾಡಿರುವವರು ಸಾಫ್ಟ್‌ವೇರ್ ಸಂಸ್ಥೆ ಕ್ಸೆರೋದ ಟ್ರೆಂಟ್ ಇನ್ನೆಸ್ ಎನ್ನುವವರು. ಇದು ಹೇಗೆ ಎಂದು ಅಚ್ಚರಿಯಾ?
ಸಂದರ್ಶನದ ಪ್ರಕ್ರಿಯೆಯಲ್ಲಿ ಸಂಭಾವ್ಯ ಅಭ್ಯರ್ಥಿಯನ್ನು ಭೇಟಿಯಾದಾಗ, ಬಾಸ್ ಅವರನ್ನು ಕಚೇರಿಯ ಅಡುಗೆ ಮನೆಗೆ ಕರೆದುಕೊಂಡು ಹೋಗಿ ಕಾಫಿ ಕೊಡುತ್ತಾರೆ. ನಂತರ ಆ ಮಗ್ ಜೊತೆಗೆ ಹೊರಗಡೆ ಬಂದು ಕಾಫಿ ಹೀರುತ್ತಾರೆ. ಕಾಫಿ ಖಾಲಿಯಾದ ಮೇಲೆ ಬಾಸ್ ಗಮನಿಸುವುದು ಏನೆಂದರೆ ಅಭ್ಯರ್ಥಿ ಖಾಲಿ ಕಾಫಿ ಮಗ್ ಅನ್ನು ಅಡುಗೆಮನೆಗೆ ಹಿಂತಿರುಗಿಸಲು ಹೋಗುತ್ತಾರೋ ಎಂದು.
ಒಂದು ವೇಳೆ ಹೀಗೆ ಹಿಂದಿರುಗಿಸಿದರೆ, ಅವರು ಕೆಲಸದ ಸ್ಥಳಕ್ಕೆ ಸೂಕ್ತವಾದರು ಎಂದು ಪರಿಗಣಿಸಲಾಗುತ್ತದೆ. ಆದರೆ ಅಲ್ಲಿಯೇ ಬಿಟ್ಟು ಹೋದರೆ ಆತ ಅನರ್ಹನೆಂದು ಪರಿಗಣಿಸಲಾಗುತ್ತದೆ. ಕಾಫಿ ಕಪ್ ತೊಳೆದು ಇಟ್ಟರೆ ಸಂಸ್ಥೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂದು ಅರ್ಥ.
ಹೀಗೆ ತಾವು ಅಭ್ಯರ್ಥಿಯನ್ನು ಆಯ್ಕೆ ಮಾಡುವುದಾಗಿ ಹೇಳಿದ್ದು, ಇದು ಪರ-ವಿರೋಧ ನಿಲುವನ್ನು ಪಡೆದುಕೊಳ್ಳುತ್ತಿದೆ.