ಜಗತ್ತಿನ ಅತಿ ದೊಡ್ಡ ಕುಟುಂಬವೊಂದರ ಬೆರಗುಗೊಳಿಸುವ ವಿಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಕಣ್ಣಿಗೆ ಬಿದ್ದಿದೆ. ಒಬ್ಬಳು ಹೆಂಡತಿಯನ್ನೇ ಸುಧಾರಿಸಲು ಕಷ್ಟಪಡುವ ಅನೇಕರಿಗೆ ಈ ವ್ಯಕ್ತಿಯ ಕಥೆ ಕೇಳಿದ್ರೆ ಖಂಡಿತಾ ಶಾಕ್ ಆಗುತ್ತೆ.. ಯಾಕಂದ್ರೆ ಈತನಿಗೆ ಇಬ್ಬರಲ್ಲ, ನಾಲ್ವರಲ್ಲ ಬರೋಬ್ಬರಿ 15 ಮಂದಿ ಮಡದಿಯರಿದ್ದಾರೆ..!
ಹೌದು, ಅಚ್ಚರಿ ಆದ್ರೂ ಇದು ಸತ್ಯ. ಡೇವಿಡ್ ಸಕಾಯೊ ಕಲುಹಾನಾ ಎಂಬ ಆಫ್ರಿಕನ್ ವ್ಯಕ್ತಿಗೆ 15 ಹೆಂಡತಿಯರು ಮತ್ತು 107 ಮಕ್ಕಳಿದ್ದಾರೆ. 61 ವರ್ಷ ವಯಸ್ಸಿನ ಇವರು ಪಶ್ಚಿಮ ಕೀನ್ಯಾದ ಗ್ರಾಮೀಣ ಹಳ್ಳಿಯಲ್ಲಿ ತಮ್ಮ ಎಲ್ಲಾ ಹೆಂಡತಿಯರೊಂದಿಗೆ ಯಾವುದೇ ಅಸಮಾಧಾನವಿಲ್ಲದೆ ಜೀವನ ಸಾಗಿಸುತ್ತಿದ್ದಾರೆ.
ತನ್ನ ಎಲ್ಲಾ ಪತ್ನಿಯರು ತಮ್ಮ ತಮ್ಮ ಕರ್ತವ್ಯಗಳನ್ನು ಹಂಚಿಕೊಂಡು ಪರಸ್ಪರ ಸಂತೋಷದಿಂದ ಬದುಕುತ್ತಾರೆ ಎಂದು ಆತ ಹೇಳಿದ್ದಾನೆ. ಅಷ್ಟೇ ಅಲ್ಲ ಡೇವಿಡ್ ನನ್ನು ಆತನ ಎಲ್ಲಾ ಪತ್ನಿಯರು ರಾಜನಂತೆ ನೋಡಿಕೊಳ್ಳುತ್ತಾರಂತೆ. 1933 ರಲ್ಲಿ ವಿವಾಹವಾದ ಆತನ ಮೊದಲ ಪತ್ನಿ ಜೆಸ್ಸಿಕಾ ಕಲುಹಾನಾ ಜೊತೆಗೆ 13 ಮಕ್ಕಳನ್ನು ಹೊಂದಿದ್ದಾರೆ. ಅಲ್ಲದೆ ಮೊದಲನೇ ಹೆಂಡತಿಗೆ ತನಗೆ ಸವತಿ ಬರುವ ಬಗ್ಗೆ ಎಂದಿಗೂ ಅಸೂಯೆ ಇರಲಿಲ್ವಂತೆ. ತನ್ನ ಗಂಡ ಜವಾಬ್ದಾರಿಯುತ ವ್ಯಕ್ತಿಯಾಗಿದ್ದು, ಆತ ಏನೂ ಮಾಡಿದ್ರು ಸರಿಯಾಗಿರುತ್ತದೆ ಎಂಬ ನಂಬಿಕೆ ಆಕೆಯದಾಗಿದೆಯಂತೆ. ಈ ಬಗ್ಗೆ ಸ್ವತಃ ಡೇವಿಡ್ ಹೇಳಿಕೊಂಡಿದ್ದಾನೆ.
15 ಮಹಿಳೆಯರನ್ನು ಮದುವೆಯಾಗುವ ಕುರಿತು ಮಾತನಾಡುತ್ತಾ ಡೇವಿಡ್ ಕಲುಹಾನಾ, 1000 ಹೆಂಡತಿಯರನ್ನು ಹೊಂದಿದ್ದ ರಾಜ ಸೊಲೊಮನ್‌ನಿಂದ ಸ್ಫೂರ್ತಿ ಪಡೆದಿದ್ದಾಗಿ ಹೇಳಿದ್ದಾನೆ. ತಾನು ಕೂಡ ಸೊಲೊಮನ್‌ಗಿಂತ ಕಡಿಮೆಯಿಲ್ಲ ಎಂದು ಪರಿಗಣಿಸಿ 15 ಮಹಿಳೆಯರನ್ನು ವಿವಾಹವಾಗಿದ್ದಾಗಿ ಹೇಳಿಕೊಂಡಿದ್ದಾನೆ. ಯೂಟ್ಯೂಬ್‌ನಲ್ಲಿ ಅಫ್ರಿಮ್ಯಾಕ್ಸ್ ಇಂಗ್ಲಿಷ್ ಹಂಚಿಕೊಂಡಿರುವ ವಿಡಿಯೋವನ್ನು 2 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.