ಶೂನ್ಯದಿಂದ ವ್ಯವಹಾರ ಆರಂಭಿಸಿ ಕೋಟ್ಯಾಧಿಪತಿಗಳಾದ ಅದೆಷ್ಟೋ ಉದ್ಯಮಿಗಳು ಭಾರತದಲ್ಲಿದ್ದಾರೆ. ಉದ್ಯಮಿಯೊಬ್ಬರ ಪುತ್ರಿ ಕೂಡ ಇಂತಹ ಸಾಧಕರಲ್ಲೊಬ್ಬರು. ತಂದೆಯ ಶತಕೋಟಿ ಡಾಲರ್ ಸಾಮ್ರಾಜ್ಯವನ್ನು ಮುನ್ನಡೆಸುತ್ತಿದ್ದಾರೆ ಸುನೀತಾ ರೆಡ್ಡಿ. ಸುನೀತಾ ರೆಡ್ಡಿ, ಹೃದ್ರೋಗ ತಜ್ಞ ಹಾಗೂ ಅಪೋಲೋ ಆಸ್ಪತ್ರೆಗಳ ವ್ಯವಸ್ಥಾಪಕ ನಿರ್ದೇಶಕ ಪ್ರತಾಪ್ ರೆಡ್ಡಿ ಅವರ ಪುತ್ರಿ. ಅವರು 1983 ರಲ್ಲಿ ಅಪೋಲೋ ಹಾಸ್ಪಿಟಲ್ಸ್ ಎಂಟರ್‌ಪ್ರೈಸ್ ಅನ್ನು ಸ್ಥಾಪಿಸಿದ್ದರು.
ಫೋರ್ಬ್ಸ್ ಪ್ರಕಾರ, ಜನವರಿ 1, 2024ರ ಹೊತ್ತಿಗೆ ಅವರ ನಿವ್ವಳ ಮೌಲ್ಯ 23,300 ಕೋಟಿ ರೂಪಾಯಿ. ಸುನೀತಾ 1989 ರಲ್ಲಿಯೇ ಆಸ್ಪತ್ರೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಅವರ ನಾಯಕತ್ವದಲ್ಲಿ ಆಸ್ಪತ್ರೆಯು ಸಮಗ್ರ ಆರೋಗ್ಯ ರಕ್ಷಣೆಯ ಪ್ರಮುಖ ಸಂಸ್ಥೆಯಾಗಿ ಹೊರಹೊಮ್ಮಿದೆ. ಅಂಕಿ-ಅಂಶಗಳ ಪ್ರಕಾರ ಅಪೊಲೊ ಆಸ್ಪತ್ರೆಗಳ ಮಾರುಕಟ್ಟೆ ಬಂಡವಾಳ 82,492 ಕೋಟಿ ರೂಪಾಯಿ.
ಸುನೀತಾ ಅವರು ಚೆನ್ನೈನ ಸ್ಟೆಲ್ಲಾ ಮಾರಿಸ್ ಕಾಲೇಜಿನಲ್ಲಿ ಸಾರ್ವಜನಿಕ ಸಂಪರ್ಕ, ಅರ್ಥಶಾಸ್ತ್ರ ಮತ್ತು ಮಾರ್ಕೆಟಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ನಂತರ ಚೆನ್ನೈನ ಇನ್‌ಸ್ಟಿಟ್ಯೂಟ್ ಆಫ್ ಫೈನಾನ್ಶಿಯಲ್ ಮ್ಯಾನೇಜ್‌ಮೆಂಟ್ ಮತ್ತು ರಿಸರ್ಚ್‌ನಿಂದ ಹಣಕಾಸು ನಿರ್ವಹಣೆಯಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಲ್ಲೂ ಓದಿದ್ದಾರೆ. ಉದ್ಯಮದಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಫಿಟ್ನೆಸ್ ಬಗ್ಗೆಯೂ ಸಾಕಷ್ಟು ಗಮನ ಹರಿಸುತ್ತಾರೆ. ಆರೋಗ್ಯಕರ ಜೀವನ ಮತ್ತು ಸಮತೋಲಿತ ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ.
ಸುನಿತಾ ರೆಡ್ಡಿ ಹಲವು ವರ್ಷಗಳಿಂದ ಹೆಲ್ತ್‌ಕೇರ್ ಕೌನ್ಸಿಲ್‌ನ ಅಧ್ಯಕ್ಷರಾಗಿದ್ದಾರೆ. ಇದು ಭಾರತದಲ್ಲಿ ಆರೋಗ್ಯ ಕ್ಷೇತ್ರವನ್ನು ಸುಧಾರಿಸಲು ಕೆಲಸ ಮಾಡುವ ಪ್ರಮುಖ ಸಂಸ್ಥೆ. ಆಸ್ಪತ್ರೆಗಳ ನಿರ್ಮಾಣ ಮತ್ತು ಅಭಿವೃದ್ಧಿಯಲ್ಲಿ ಸುನೀತಾ ರೆಡ್ಡಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸುನಿತಾ ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ಮತ್ತು ಹಾರ್ವರ್ಡ್ ಮೆಡಿಕಲ್ ಸ್ಕೂಲ್ ನ ಸಲಹಾ ಮಂಡಳಿಯ ಸದಸ್ಯರೂ ಹೌದು. ತಂದೆಯ ಉದ್ಯಮಕ್ಕೆ ಬೆನ್ನೆಲುಬಾಗಿ ನಿಂತಿರೋ ಸುನೀತಾ ರೆಡ್ಡಿ ಸಾವಿರಾರು ಕೋಟಿ ರೂಪಾಯಿ ವಹಿವಾಟನ್ನು ಮುನ್ನಡೆಸುತ್ತಿದ್ದಾರೆ.