ಜೀವನದಲ್ಲಿ ಏನಾದರೂ ಒಂದು ಸಾರ್ಥಕತೆಯನ್ನು ಮೆರೆಯಬೇಕೆಂಬುದು ಬಹುತೇಕ ಎಲ್ಲರ ಬಯಕೆಯಾಗಿರುತ್ತದೆ. ಕೆಲವರಿಗೆ ಈ ಸಾರ್ಥಕತೆಯನ್ನು ಸಾಧಿಸಲು ಅವಕಾಶ ಸಿಗುತ್ತದೆ, ಮತ್ತೆ ಕೆಲವರಿಗೆ ಬಯಕೆಯಾಗಿಯೇ ಉಳಿಯುತ್ತದೆ.
ಇಲ್ಲೊಬ್ಬ 90 ವರ್ಷದ ಹಣ್ಣು ಹಣ್ಣು ಮುದುಕಿ ಪ್ರತಿದಿನ ಬೆಳಗಿನ ಜಾವ 4.30 ಕ್ಕೇ ಎದ್ದು ಊಟ ಸಿದ್ಧಪಡಿಸುವ ಕಾಯಕದಲ್ಲಿ ತೊಡಗಿದ್ದಾರೆ. ಅಂದ ಹಾಗೆ ಇವರು ಅಡುಗೆ ತಯಾರಿಸಿ ಮಾರಾಟ ಮಾಡುವ ವ್ಯವಹಾರವನ್ನೇನೂ ಮಾಡುತ್ತಿಲ್ಲ. ಇದರ ಬದಲಿಗೆ ತಮ್ಮ ಮನೆಯ ಸುತ್ತಮುತ್ತಲಿನ ಬೀದಿ ನಾಯಿಗಳಿಗೆ ಊಟವನ್ನು ಸಿದ್ಧಪಡಿಸುವ ಕಾಯಕದಲ್ಲಿ ತೊಡಗಿದ್ದಾರೆ.
ಹೌದು. ಕನಕ ಎಂಬ ಮುಂಬೈನ ಈ ವೃದ್ಧೆ ಮಾಡುತ್ತಿರುವ ದೈನಂದಿನ ಕಾಯಕದ ವಿಡಿಯೋವನ್ನು ಹ್ಯೂಮನ್ ಆಫ್ ಬಾಂಬೆ ಎಂಬ ಸಂಸ್ಥೆ ತನ್ನ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಅಜ್ಜಿಯ ಕಾಯಕದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಈ ಅಜ್ಜಿಗೆ ನಾಯಿಗಳನ್ನು ಕಂಡರೆ ಅಷ್ಟೇನೂ ಪ್ರೀತಿ ಇರಲಿಲ್ಲ. ಆದರೆ, ಈಕೆಯ ಮೊಮ್ಮಗಳು ಕೊಕೊ ಹೆಸರಿನ ಒಂದು ನಾಯಿ ಮರಿಯನ್ನು ಮನೆಗೆ ತಂದು ಸಾಕತೊಡಗಿದಾಗ ಅಜ್ಜಿಗೆ ನಾಯಿಗಳ ಬಗ್ಗೆ ಪ್ರೀತಿ, ಮಮಕಾರ ಹುಟ್ಟಿಕೊಂಡಿತು. ಆ ಪ್ರೀತಿ ಹತ್ತಾರು ನಾಯಿಗಳಿಗೆ ತಾಯಿಯ ಸ್ಥಾನವನ್ನು ನೀಡುವಂತೆ ಮಾಡಿತು.
Stock Market Update: ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ಭರ್ಜರಿ ಸುಗ್ಗಿ; ಓಪನ್ ನಲ್ಲೇ ಸೆನ್ಸೆಕ್ಸ್ 500, ನಿಫ್ಟಿ 17 ಸಾವಿರಕ್ಕಿಂತ ಹೆಚ್ಚು ಏರಿಕೆ
ನನ್ನ ಮೊಮ್ಮಗಳು ಸನಾ, ನಾಯಿ ಮರಿಯನ್ನು ಮನೆಗೆ ತಂದಾಗ ನನಗೆ ಅದರ ಮೇಲೆ ಯಾವುದೇ ಪ್ರೀತಿ ಇರಲಿಲ್ಲ. ಅಷ್ಟಕ್ಕೂ ನಾನು ನಾಯಿ ಮರಿಯನ್ನು ಇಷ್ಟಪಡುತ್ತಿರಲಿಲ್ಲ. ಆದರೆ, ದಿನ ಕಳೆದಂತೆ ಮುದ್ದಾದ ನಾಯಿ ಮರಿಯು ಅತ್ತಿಂದಿತ್ತ ಓಡಾಡಿಕೊಂಡು ತಿನ್ನುತ್ತಾ, ಆಟವಾಡುತ್ತಾ ನನಗೆ ಮುದ ನೀಡಲು ಆರಂಭಿಸಿತು. ನನಗೆ ಅರಿವಿಲ್ಲದೆಯೇ ಆ ನಾಯಿ ಮರಿ ಮೇಲೆ ಪ್ರೀತಿ ಹುಟ್ಟಲಾರಂಭಿಸಿತು ಎಂದು ಕನಕ ಹೇಳಿಕೊಂಡಿದ್ದಾರೆ.
ಈ ನಾಯಿ ಮರಿ ಮೇಲಿನ ಪ್ರೀತಿಯನ್ನು ಕನಕ ಅಷ್ಟಕ್ಕೇ ಸೀಮಿತಗೊಳಿಸಲಿಲ್ಲ. ಬದಲಿಗೆ ಮನೆಯಿಂದ ಹೊರಗೆ ವಾಸಿಸುವ ಹತ್ತಾರು ನಾಯಿಗಳಿಗೂ ಅದೇ ಪ್ರೀತಿ ತೋರಿಸಲಾರಂಭಿಸಿದರು. ಹೀಗೆ ಕಳೆದ ಹಲವು ವರ್ಷಗಳಿಂದ ಬೆಳಗಿನ ಜಾವ 4.30 ಕ್ಕೆ ಎದ್ದು ಬೀದಿನಾಯಿಗಳಿಗೆ ಊಟೋಪಚಾರ ಮಾಡುವ ಕಾಯಕದಲ್ಲಿ ತೊಡಗಿದ್ದಾರೆ. ಇನ್ನು ಮೊಮ್ಮಗಳು ಸನಾ ಬೀದಿ ನಾಯಿಗಳಿಗೆ ಲಸಿಕೆ ಕೊಡಿಸುವುದು ಸೇರಿದಂತೆ ಇನ್ನಿತರೆ ಚಿಕಿತ್ಸಾ ಕಾರ್ಯಗಳ ನೇತೃತ್ವ ವಹಿಸುವ ಮೂಲಕ ಅಜ್ಜಿಗೆ ನೆರವಾಗುತ್ತಿದ್ದಾರೆ. ಅಜ್ಜಿಯ ಈ ಕಾಯಕವನ್ನು ಅನೇಕ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.