ತನ್ನನ್ನು ತಾನು “ಅತೀಂದ್ರಿಯ” ಎಂದು ವಿವರಿಸುತ್ತಿರುವ ಮಹಿಳೆಯೊಬ್ಬಳು ತಾನು ದೆವ್ವಗಳೊಂದಿಗೆ ಮಾತನಾಡಲು ಸಮರ್ಥಳೆಂದು ಹೇಳಿಕೊಂಡು ಸುದ್ದಿಯಾಗಿದ್ದಾಳೆ. ದೆವ್ವಗಳೊಂದಿಗೆ ಸಂವಹನ ಮಾಡಬಲ್ಲೆ ಹಾಗೂ ಅವುಗಳನ್ನು ನಿಯಂತ್ರಿಸಬಲ್ಲೆ ಎಂದಿದ್ದಾಳೆ ಈಕೆ.
28 ವರ್ಷ ವಯಸ್ಸಿನ ಲಿಡಿಯಾ ಥಾಮಸ್ ಎಂಬಾಕೆ ತಾನು ಕೇವಲ ಎಂಟು ವರ್ಷದವಳಿದ್ದಾಗ ದೆವ್ವಗಳನ್ನು ನೋಡಲು ಪ್ರಾರಂಭಿಸಿದ್ದೆ ಎನ್ನುತ್ತಿದ್ದಾಳೆ. ಅವಳು ಎದುರಿಸಿದ ಮೊದಲ ಆತ್ಮವು ಅವಳ ಅಜ್ಜಿಯದ್ದಾಗಿತ್ತಂತೆ.
ತಾನು ಹುಟ್ಟುವ ಮೊದಲೇ ಅಜ್ಜಿ ಮರಣ ಹೊಂದಿದಳು ಮತ್ತು ತನ್ನ ಮಲಗುವ ಕೋಣೆ ದ್ವಾರದಲ್ಲಿ ಕಾಣಿಸಿಕೊಂಡಳು. ಅಂದಿನಿಂದ ಈ ಶಕ್ತಿ ತನಗೆ ಬಂದಿದೆ ಎನ್ನುತ್ತಿದ್ದಾಳೆ ಲಿಡಿಯಾ.
ಎರಡು ವರ್ಷಗಳ ಕಾಲ ತನ್ನ ರಹಸ್ಯವನ್ನು ಸುರಕ್ಷಿತವಾಗಿಟ್ಟ ನಂತರ, ಅವಳು ಅದೇ ವಿಷಯವನ್ನು ತನ್ನ ಕುಟುಂಬಕ್ಕೆ ತಿಳಿಸಲು ನಿರ್ಧರಿಸಿದ್ದಾಗಿ ಹೇಳಿದ್ದಾಳೆ. “ಹದಿಹರೆಯದವಳಾಗಿದ್ದಾಗ, ಈ ದೆವ್ವಗಳ ಭಯದಲ್ಲಿ ವಾಸಿಸುತ್ತಿದ್ದೆ. ಒಂದು ರಾತ್ರಿ ತನ್ನ ಮುಖಕ್ಕೆ ಒಂದು ಕೈ ಸ್ಪರ್ಶವಾಯಿತು. ಆಗ ಚೆನ್ನಾಗಿ ನಿದ್ರೆ ಮಾಡಲು ಸಾಧ್ಯವಾಗಲಿಲ್ಲ. ನಂತರ ನನ್ನಲ್ಲಿ ಅದೇನೋ ಶಕ್ತಿ ಬಂದಿತು. ದೆವ್ವಗಳನ್ನು ನಾನು ನಿಯಂತ್ರಿಸಬಲ್ಲೆ ಎನ್ನಿಸಿ ಹಾಗೆಯೇ ಮಾಡುತ್ತಿದ್ದೇನೆ ” ಎನ್ನುತ್ತಾಳೆ.
ಕೆನಡಾದ ವ್ಯಾಂಕೋವರ್‌ನಲ್ಲಿ 34 ವರ್ಷದ ತನ್ನ ಗೆಳೆಯ ಡೇನಿಯಲ್‌ನೊಂದಿಗೆ ವಾಸಿಸುತ್ತಿರುವ ಲಿಡಿಯಾ ಈಗ ಭಾರಿ ವೈರಲ್ ಆಗಿದ್ದು, ಈಕೆಯನ್ನು ನೋಡಲು ಜನ ತಂಡೋಪತಂಡವಾಗಿ ಬರುತ್ತಿದ್ದಾರೆ. ಕೆಲವರು ಈಕೆಯ ಮಾತನ್ನು ನಂಬದಿದ್ದರೆ, ಹಲವರಿಗೆ ಇದರಲ್ಲಿ ನಂಬಿಕೆ ಇದೆ.