ಎಲ್ಲರಿಗೂ ತಮ್ಮ ಕೂದಲು, ಮುಖ ಹೊಳೆಯುತ್ತಿರಬೇಕು ಎಂಬ ಆಸೆ ಇರುತ್ತದೆ. ಹಾಗಾಗಿ ದುಬಾರಿ, ಕ್ರೀಮ್, ಶಾಂಪೂ ತಂದು ಉಪಯೋಗಿಸುತ್ತಾರೆ. ಆದರೆ ಇದು ಕೇವಲ ತಾತ್ಕಾಲಿಕ ಫಲಿತಾಂಶ ನೀಡುತ್ತದೆ. ನೈಸರ್ಗಿಕವಾಗಿ ಸಿಗುವ ಹಣ್ಣು, ತರಕಾರಿಗಳಿಂದ ನಮ್ಮ ದೇಹದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಹೇಗೆ ಎಂಬುದಕ್ಕೆ ಇಲ್ಲಿದೆ ನೋಡಿ ಟಿಪ್ಸ್.
ಕುಂಬಳಕಾಯಿಂದ ಸಾಂಬಾರು, ಹಲ್ವಾ ಹೀಗೆ ನಾನಾ ತರಹದ ಖಾದ್ಯಗಳನ್ನು ಮಾಡಿಕೊಂಡು ಸವಿಯುತ್ತೇವೆ. ಅದೇ ಕುಂಬಳಕಾಯಿಯಿಂದ ನಮ್ಮ ಸೌಂದರ್ಯವನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಇದರಲ್ಲಿ ಸಾಕಷ್ಟು ಪೋಷಕಾಂಶಗಳು ಇವೆ. ನಮ್ಮ ಚರ್ಮ ಹಾಗೂ ಕೂದಲಿನ ಕಾಂತಿಗೆ ಇದು ಹೇಳಿ ಮಾಡಿಸಿದ್ದು.
ಮುಖದಲ್ಲಿ ಕಪ್ಪು ಕಲೆ, ಚುಕ್ಕಿಗಳಿದ್ದರೆ ಒಂದು ಟೇಬಲ್ ಸ್ಪೂನ್ ಕುಂಬಳಕಾಯಿ ತಿರುಳು ತೆಗೆದುಕೊಳ್ಳಿ. ಇದನ್ನು ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿಕೊಳ್ಳಿ. ಇದಕ್ಕೆ 1 ಟೀ ಸ್ಪೂನ್ ಜೇನು ತುಪ್ಪ, 1 ಟೀ ಸ್ಪೂನ್ ಲಿಂಬೆ ಹಣ್ಣಿನ ರಸ, 1 ಟೀ ಸ್ಪೂನ್ ವಿಟಮಿನ್ ಇ ಆಯಿಲ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದನ್ನು ಮುಖಕ್ಕೆ ಹಚ್ಚಿಕೊಂಡು ಅರ್ಧ ಗಂಟೆ ಬಿಡಿ. ಆಮೇಲೆ ಮುಖ ತೊಳೆಯಿರಿ. ಇದರಿಂದ ನಿಮ್ಮ ಮುಖದ ಅಂದ ಹೆಚ್ಚುತ್ತದೆ.
ಇನ್ನು ಒರಟಾದ ಕೂದಲಿಗೆ 2 ಕಪ್ ಬೇಯಿಸಿದ ಕುಂಬಳಕಾಯಿ ಹೋಳಿಗೆ 1 ಟೇಬಲ್ ಸ್ಪೂನ್ ತೆಂಗಿನೆಣ್ಣೆ, 1 ಟೇಬಲ್ ಸ್ಪೂನ್ ಜೇನುತುಪ್ಪ, 1 ಟೇಬಲ್ ಸ್ಪೂನ್ ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದನ್ನು ನಿಮ್ಮ ತಲೆಗೆ ಹಚ್ಚಿಕೊಳ್ಳಿ. 20 ನಿಮಿಷ ಬಿಟ್ಟು ತಣ್ಣೀರಿನಿಂದ ತಲೆ ತೊಳೆದುಕೊಳ್ಳಿರಿ.