ಕೊರೊನಾ ಎರಡನೇ ಅಲೆಯ ಅಬ್ಬರ ಕಡಿಮೆಯಾಗ್ತಿದೆ. ಮೂರನೇ ಅಲೆ ಭಯ ಶುರುವಾಗಿದೆ. ಕೆಲ ಆರೋಗ್ಯ ತಜ್ಞರು ಮೂರನೇ ಅಲೆಯಿಲ್ಲ ಎನ್ನುತ್ತಿದ್ದಾರೆ. ಮತ್ತೆ ಕೆಲವರು ಮೂರನೇ ಅಲೆ ಭಯಾನಕವಾಗಿರಲಿದೆ ಎಂಬ ಎಚ್ಚರಿಕೆ ನೀಡಿದ್ದಾರೆ. ಈ ಮಧ್ಯೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸ್ವಲ್ಪ ನೆಮ್ಮದಿ ಸುದ್ದಿ ನೀಡಿದೆ. ಕೊರೊನಾ ಮೂರನೇ ಅಲೆ, ಎರಡನೇ ಅಲೆಯಷ್ಟು ಅಪಾಯಕಾರಿಯಾಗಿರುವುದಿಲ್ಲ ಎಂದಿದೆ.
ಪ್ರತಿ ಹೊಸ ರೂಪಾಂತರಿ ವೈರಸ್ ಹೆಚ್ಚು ಶಕ್ತಿ ಹೊಂದಿರುವುದಿಲ್ಲ ಎಂದು ಐಸಿಎಂಆರ್ ನ ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ಸಾಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥ ಡಾ.ಸಮಿರನ್ ಪಾಂಡ ಹೇಳಿದ್ದಾರೆ.
ಹೊಸ ರೂಪಾಂತರದ ಗುರುತಿಸುವಿಕೆಯ ಬಗ್ಗೆ ಹೆಚ್ಚಿನ ಚರ್ಚೆ ನಡೆಯುತ್ತಿದೆ. ಆದರೆ ಅದು ಎಷ್ಟು ವೇಗವಾಗಿ ಹರಡಬಹುದು ಅಥವಾ ಅದು ಯಾವ ಗಂಭೀರ ಪರಿಣಾಮಗಳನ್ನು ಬೀರುತ್ತದೆ ಎಂಬುದನ್ನು ಗಮನಿಸಬೇಕೆಂದು ಅವರು ಹೇಳಿದ್ದಾರೆ. ಭಾರತದಲ್ಲಿ ಮೂರನೇ ಅಲೆ ಗಮನದಲ್ಲಿಟ್ಟುಕೊಂಡು ಐಸಿಎಂಆರ್ ಮತ್ತು ಲಂಡನ್‌ನ ಇಂಪೀರಿಯಲ್ ಕಾಲೇಜ್ ಒಂದು ಅಧ್ಯಯನ ನಡೆಸಿದೆ.
ಈ ಅಧ್ಯಯನವು ಮೂರನೇ ಅಲೆ, ಎರಡನೇ ಅಲೆಗಿಂತ ಹೆಚ್ಚು ಅಪಾಯಕಾರಿಯಾಗಿರುವುದಿಲ್ಲ ಎಂಬ ವರದಿ ನೀಡಿದೆ. ಎರಡನೇ ಅಲೆ ಕೊನೆಗೊಂಡ ಮೂರು ತಿಂಗಳಲ್ಲಿ ಶೇಕಡಾ 40 ರಷ್ಟು ಜನರಿಗೆ ಲಸಿಕೆ ನೀಡಿದರೆ, ಮೂರನೇ ತರಂಗದ ಉತ್ತುಂಗವನ್ನು ಮತ್ತಷ್ಟು ಕಡಿಮೆ ಮಾಡಬಹುದು. ವೇಗವಾಗಿ ಹರಡುವ ರೂಪಾಂತರ ಬಂದರೂ ಸಹ, ಇದು ಹಿಂದಿನ ಅಲೆಗಿಂತ ಹೆಚ್ಚು ಅಪಾಯಕಾರಿಯಾಗಿರುವುದಿಲ್ಲ ಎಂಬುದು ಅಧ್ಯಯನದಿಂದ ಗೊತ್ತಾಗಿದೆ. ಆದ್ರೆ ಕೊರೊನಾ ಪ್ರೋಟೋಕಾಲ್ ಮುರಿಯಬಾರದು. ಎಲ್ಲ ಎಚ್ಚರಿಕೆಯನ್ನು ಸರಿಯಾಗಿ ಪಾಲಿಸಬೇಕೆಂದು ಪಾಂಡೆ ಹೇಳಿದ್ದಾರೆ.