ಕೊರೊನಾ ಮೂರನೇ ಅಲೆ ಈಗಾಗಲೇ ಶುರುವಾಗಿದೆ ಎಂದು ಕೆಲವರು ಸಂಶಯ ವ್ಯಕ್ತಪಡಿಸಿದ್ದಾರೆ. ಆದ್ರೆ ಕೊರೊನಾ ಮೂರನೇ ಅಲೆ ಇನ್ನೂ ಎರಡು – ಮೂರು ವಾರದಲ್ಲಿ ಶುರುವಾಗಲಿದೆ ಎಂದು ವೈದ್ಯಕೀಯ ಸಂಶೋಧನಾ ಮಂಡಳಿಯ ಮುಖ್ಯ ಸಾಂಕ್ರಾಮಿಕ ರೋಗ ತಜ್ಞ ಡಾ.ಸಮಿರನ್ ಪಾಂಡ ಹೇಳಿದ್ದಾರೆ. ಆಗಸ್ಟ್ ನಿಂದ ದೇಶದಲ್ಲಿ ಕೊರೊನಾ ಮೂರನೇ ಅಲೆ ಶುರುವಾಗಲಿದ್ದು, ಅದಕ್ಕೆ ಜನರ ಗುಂಪು ಕಾರಣವಾಗಲಿದೆ ಎಂದವರು ಹೇಳಿದ್ದಾರೆ.
ಎರಡನೇ ಅಲೆಯಂತೆ ಯಾವುದೇ ಚುನಾವಣೆ ಮೂರನೇ ಅಲೆಗೆ ಕಾರಣವಾಗುವುದಿಲ್ಲ. ಜನರ ಸಮೂಹ ಮೂರನೇ ಅಲೆಗೆ ಕಾರಣವಾಗಲಿದೆ ಎಂದವರು ಹೇಳಿದ್ದಾರೆ. ಮೂರನೇ ಅಲೆಯಲ್ಲಿ ಶೇಕಡಾ 50ರಷ್ಟು ದಿನದ ಪ್ರಕರಣ ಹೆಚ್ಚಾಗಲಿದೆ ಎಂದವರು ಅಂದಾಜಿಸಿದ್ದಾರೆ. ಪ್ರತಿ ದಿನ 1 ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ ಎಂದು ಪಾಂಡ ಹೇಳಿದ್ದಾರೆ.
ಎರಡನೇ ಅಲೆಗೆ ಹೋಲಿಕೆ ಮಾಡಿದ್ದಲ್ಲಿ ಇದು ಕಡಿಮೆ ಎನ್ನಬಹುದು. ಮೇ ಮೊದಲ ವಾರದಲ್ಲಿ ದೇಶದಲ್ಲಿ ಪ್ರತಿದಿನ ನಾಲ್ಕು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದವು. ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ, ಪ್ರತಿದಿನ ಸರಾಸರಿ 40 ರಿಂದ 45 ಸಾವಿರ ಪ್ರಕರಣಗಳು ವರದಿಯಾಗುತ್ತಿವೆ. ಕೊರೊನಾ ಪ್ರೋಟೋಕಾಲ್ ಮುರಿದು ಜನರು ಗುಂಪು ಸೇರುತ್ತಿದ್ದಾರೆ. ಕೊರೊನಾ ಕಡಿಮೆಯಾಗ್ತಿದ್ದಂತೆ ನಿರ್ಲಕ್ಷ್ಯ ಹೆಚ್ಚಾಗಿದೆ. ಇದು ಕೊರೊನಾ ಮೂರನೇ ಅಲೆಗೆ ಕಾರಣವಾಗಲಿದೆ ಎಂದವರು ಅಂದಾಜಿಸಿದ್ದಾರೆ.