ಅಮೃತಸರದ ಗೋಲ್ಡನ್ ಟೆಂಪಲ್ ಬಳಿ ನಿನ್ನೆ ತಡರಾತ್ರಿ ಮತ್ತೆ ಸ್ಫೋಟ ಸಂಭವಿಸಿದ ನಂತರ ಪಂಜಾಬ್ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಅಮೃತಸರದ ಹೆರಿಟೇಜ್ ಸ್ಟ್ರೀಟ್ ಬಳಿ ತಡರಾತ್ರಿ 1 ಗಂಟೆ ಸುಮಾರಿಗೆ ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸಿದೆ. ಐದು ದಿನಗಳಲ್ಲಿ ಸಂಭವಿಸಿದ ಮೂರನೇ ಸ್ಫೋಟ ಇದಾಗಿದೆ.
“ಇದರ ಹಿಂದಿನ ಸಂಪೂರ್ಣ ಆಳವಾದ ಪಿತೂರಿಯನ್ನು ನಾವು ತನಿಖೆ ಮಾಡುತ್ತೇವೆ. ನಾವು ಭಾರತ ಮತ್ತು ವಿದೇಶಗಳಲ್ಲಿ ಬಂಧಿತರ ಎಲ್ಲಾ ಸಹಚರರನ್ನು ಪರೀಕ್ಷಿಸುತ್ತೇವೆ ” ಎಂದು ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಹೇಳಿದ್ದಾರೆ.
ಅಮೃತಸರದ ಗೋಲ್ಡನ್ ಟೆಂಪಲ್ ಬಳಿ ಇರುವ ವಾಶ್ ರೂಂನಲ್ಲಿ ಸ್ಫೋಟಕವನ್ನು ಜೋಡಿಸಲಾಗಿತ್ತು. ಪಟಾಕಿಗಳಲ್ಲಿ ಬಳಸುವ ರಾಸಾಯನಿಕ ವಸ್ತುಗಳನ್ನು ಉಪಯೋಗಿಸಿ ಸ್ಫೋಟಕ ತಯಾರಿಸಲಾಗಿತ್ತು ಎಂದು ತಿಳಿದುಬಂದಿದೆ.
ಸಿಸಿ ಕ್ಯಾಮೆರಾ ದೃಶ್ಯಾವಳಿಗಳ ಸಹಾಯದಿಂದ ಆರೋಪಿಗಳನ್ನು ಪತ್ತೆ ಹಚ್ಚಿ ಗುರುತಿಸಲಾಗಿದೆ. ಅಜಾದ್ವೀರ್ ಸಿಂಗ್, ಅಮ್ರಿಕ್ ಸಿಂಗ್, ಸಾಹಿಬ್ ಸಿಂಗ್, ಹರ್ಜಿತ್ ಸಿಂಗ್ ಮತ್ತು ಧರ್ಮಿಂದರ್ ಸಿಂಗ್ ಬಂಧಿತ ಆರೋಪಿಗಳು.
ಮೊದಲ ಸ್ಫೋಟವು ಮೇ 6 ರಂದು ಮತ್ತು ಎರಡನೆಯದು ಸೋಮವಾರ ಸಂಭವಿಸಿದೆ. ಬುಧವಾರ ತಡರಾತ್ರಿ ನಡೆದ ಕಡಿಮೆ ತೀವ್ರತೆಯ ಸ್ಫೋಟದ ಸ್ಥಳವು ನಗರದ ಜನಪ್ರಿಯ ಪ್ರವಾಸಿ ತಾಣವಾದ ಗೋಲ್ಡನ್ ಟೆಂಪಲ್ ಬಳಿಯ ಹೆರಿಟೇಜ್ ಸ್ಟ್ರೀಟ್‌ನಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಪಂಜಾಬ್ ಪೊಲೀಸರು ಸ್ಫೋಟದ ಸ್ಥಳದಿಂದ ವಿಧಿವಿಜ್ಞಾನ ಮಾದರಿಗಳನ್ನು ಸಂಗ್ರಹಿಸಿದ್ದಾರೆ.