ಈಗ ಯಾವ ಮಕ್ಕಳನ್ನು ನೋಡಿದ್ರೂ ಕೈಯಲ್ಲಿ ಮೊಬೈಲ್ ಹಿಡಿದುಕೊಂಡೇ ಇರುತ್ತಾರೆ. ಚಿಕ್ಕ ಮಗುವಿಗು ಊಟ, ತಿನಿಸುವುದಕ್ಕೆ, ಹಾಲು ಕುಡಿಸುವುದಕ್ಕೂ ಮೊಬೈಲ್ ಇದ್ದರೆ ಆಯ್ತು. ಈಗಂತೂ ಆನ್ ಲೈನ್ ಕ್ಲಾಸ್ ಗಳು ಬೇರೆ ಶುರುವಾಗಿದೆ. ಮಕ್ಕಳ ಕೈಗೆ ಮೊಬೈಲ್ ಕೊಡದೇ ಇರುವುದಾದರೂ ಹೇಗೆ ಎಂಬುದು ಪೋಷಕರ ಅಳಲು.
ಮೊಬೈಲ್ ಬಳಕೆ ತಪ್ಪಲ್ಲ. ಆದರೆ ಅದನ್ನು ಹೇಗೆ ಅವರು ಬಳಸುತ್ತಿದ್ದಾರೆ ಎಂಬುದು ಪೋಷಕರಿಗೆ ತಿಳಿದಿರಬೇಕು. ಮಕ್ಕಳ ಕೈಗೆ ಮೊಬೈಲ್ ಕೊಟ್ಟರೆ ಹಟ ಮಾಡದೇ ಸುಮ್ಮನೇ ಇರುತ್ತಾರೆ ಎಂದು ಪೋಷಕರು ಬೇರೆ ಕೆಲಸ ಮಾಡುತ್ತಿದ್ದರೆ ಅನಾಹುತಕ್ಕೆ ದಾರಿಯಾಗುತ್ತದೆ.
ಇವಾಗ ಫೋನ್ ನಲ್ಲಿಯೇ ಹೆಚ್ಚಿನ ವ್ಯವಹಾರ ಇರುವುದರಿಂದ ಮಕ್ಕಳ ಕೈಗೆ ಫೋನ್ ಕೊಡುವಾಗ ನೀವು ಹತ್ತಿರದಲ್ಲಿರುವುದು ಒಳ್ಳೆಯದು. ಮಕ್ಕಳು ತಿಳಿಯದೇ ಯಾವುದೋ ಒಂದು ಬಟನ್ ಟಚ್ ಮಾಡಿ ಅದು ಇನ್ಯಾವುದಕ್ಕೋ ಹೋಗುವ ಸಾಧ್ಯತೆ ಹೆಚ್ಚು. ಮಕ್ಕಳ ಕೈಗೆ ಫೋನ್ ಕೊಟ್ಟು ಆದ ಅವಾಂತರಗಳಿಗೇನೂ ಕಮ್ಮಿಯಿಲ್ಲ!
ನಿಮ್ಮ ಖಾಸಗಿ ಫೋಟೊ, ಬ್ಯಾಂಕ್ ಮಾಹಿತಿಗಳು ಇರುವ ಫೋನ್ ಅನ್ನು ಅವರ ಕೈಗೆ ಕೊಡಬೇಡಿ. ವಾಟ್ಸಾಪ್, ಫೇಸ್ ಬುಕ್ ನೀವು ಉಪಯೋಗಿಸುತ್ತಿದ್ದರೆ ಅದಕ್ಕೆ ಸ್ಕ್ರೀನ್ ಲಾಕ್ ಹಾಕಿಡಿ. ಇನ್ನು ಮಕ್ಕಳು ಫೋನ್ ಉಪಯೋಗಿಸುವಾಗ ನೀವು ಅವರ ಬಳಿ ನಿಂತು ಗಮನಿಸುವುದು ಒಳ್ಳೆಯದು.