ಮಗುವಿಗೆ ಹಾಲುಣಿಸುವ ತಾಯಂದಿರು ಆಹಾರ ಮತ್ತು ಪಾನೀಯದ ಬಗ್ಗೆ ಅನೇಕ ತಪ್ಪು ಕಲ್ಪನೆಗಳನ್ನು ಎದುರಿಸಬೇಕಾಗುತ್ತದೆ. ತಾಯಿ ಸೇವಿಸುವ ಕೆಲವು ರೀತಿಯ ಆಹಾರವು ಮಗುವಿಗೆ ಹಾನಿಯನ್ನುಂಟುಮಾಡುತ್ತದೆ ಎಂಬ ಭಾವನೆ ಜನರ ಮನಸ್ಸಿನಲ್ಲಿದೆ. ತಣ್ಣೀರಿನಲ್ಲಿ ಕೆಲಸ ಮಾಡಬೇಡಿ, ದೇಹವನ್ನು ಯಾವಾಗಲೂ ಬೆಚ್ಚಗಿಟ್ಟುಕೊಳ್ಳಿ. ಸ್ವೆಟರ್ ಮತ್ತು ಟೋಪಿ ಧರಿಸಿ ಎಂದೆಲ್ಲ ಹಿರಿಯರು ಸಲಹೆ ನೀಡುತ್ತಾರೆ.
ತಾಯಿ ತಣ್ಣಗಿದ್ದರೆ ಅದರ ಪರಿಣಾಮ ಮಗುವಿನ ಮೇಲಾಗುತ್ತದೆ ಎನ್ನುವುದು ಅನೇಕರ ಅಭಿಪ್ರಾಯ. ಮಗುವಿಗೆ ಶೀತದಂತಹ ಸಮಸ್ಯೆಗಳು ಬರುತ್ತವೆ ಎಂದು ಹೇಳಲಾಗುತ್ತದೆ. ಆದರೆ ಇದು ಎಷ್ಟರಮಟ್ಟಿಗೆ ಸತ್ಯ ಎಂಬುದನ್ನು ತಜ್ಞರಿಂದಲೇ ತಿಳಿಯೋಣ.
ಮಹಿಳೆ ಗರ್ಭಿಣಿಯಾಗಿದ್ದಾಗ ಆಕೆಯ ದೇಹದಲ್ಲಿ ಪ್ರೊಲ್ಯಾಕ್ಟಿನ್ ಮತ್ತು ಪ್ರೊಜೆಸ್ಟರಾನ್‌ನಂತಹ ಹಾರ್ಮೋನುಗಳು ಹೆಚ್ಚಾಗಲು ಪ್ರಾರಂಭಿಸುತ್ತವೆ. ಈ ಹಾರ್ಮೋನುಗಳು ಸ್ತನಗಳನ್ನು ಹಾಲು ಉತ್ಪಾದಿಸಲು ಸಿದ್ಧಪಡಿಸುತ್ತವೆ. ಮಗು ಜನಿಸಿದಾಗ ಮಗುವಿನ ಬಾಯಿಯು ಸ್ತನದ ಸಂಪರ್ಕಕ್ಕೆ ಬಂದ ತಕ್ಷಣ ಸ್ತನಗಳಲ್ಲಿ ಪ್ರೋಲ್ಯಾಕ್ಟಿನ್ ಹಾರ್ಮೋನ್ ಹಾಲು ಉತ್ಪಾದಿಸಲು ಪ್ರಾರಂಭಿಸುತ್ತದೆ. ನಂತರ ಹಾಲಿನ ಹರಿವು ನಿರಂತರವಾಗಿ ಮುಂದುವರಿಯುತ್ತದೆ. ಈ ಪ್ರಕ್ರಿಯೆಯಲ್ಲಿ ತಾಯಿಯ ಆಹಾರ ಪದ್ಧತಿ ಮತ್ತು ಪೋಷಣೆ ಕೂಡ ಪ್ರಮುಖ ಪಾತ್ರ ವಹಿಸುತ್ತದೆ.
ತಾಯಿಯ ಶೀತವು ಮಗುವಿಗೆ ಹಾನಿ ಮಾಡುತ್ತದೆಯೇ?
ಅನೇಕ ಹಾಲುಣಿಸುವ ತಾಯಂದಿರು ಈ ಪ್ರಶ್ನೆಯನ್ನು ಎದುರಿಸುತ್ತಾರೆ. ಅವರ ದೇಹವು ತಣ್ಣಗಿದ್ದರೆ ಮಗುವಿಗೆ ಹಾಲು ನೀಡುವುದು ಸರಿಯಲ್ಲ, ಇದರಿಂದ ಮಗುವಿಗೆ ಶೀತವಾಗಬಹುದು ಎಂದು ಹೇಳಲಾಗುತ್ತದೆ. ಆದರೆ ತಜ್ಞರ ಪ್ರಕಾರ ಇದು ಸಂಪೂರ್ಣ ತಪ್ಪು ಕಲ್ಪನೆ. ತಾಯಿಯ ದೇಹದ ತಂಪಾಗುವಿಕೆಯು ಮಗುವಿಗೆ ಹಾನಿಕಾರಕವಲ್ಲ. ತಾಯಿ ಚಳಿಯಲ್ಲಿ ಕೆಲಸ ಮಾಡುತ್ತಿದ್ದರೂ ತಾಯಿಯ ಹಾಲು ತಣ್ಣಗಾಗುವುದಿಲ್ಲ.
ಹಾಲುಣಿಸುವ ಸಮಯದಲ್ಲಿ ತಾಯಿ ಔಷಧಿ ತೆಗೆದುಕೊಳ್ಳಬಹುದೇ?
ಹೆಚ್ಚಿನ ಹಾಲುಣಿಸುವ ತಾಯಂದಿರು ಔಷಧಿಗಳನ್ನು ತೆಗೆದುಕೊಳ್ಳುವಾಗಲೂ ತಮ್ಮ ಮಗುವಿಗೆ ಹಾಲುಣಿಸಬಹುದೇ ಅಥವಾ ಇಲ್ಲವೇ ಎಂದು ತಿಳಿಯಲು ಬಯಸುತ್ತಾರೆ. ಈ ವಿಚಾರದಲ್ಲಿ ಅವರ ಮನಸ್ಸಿನಲ್ಲಿ ಸಾಕಷ್ಟು ಅನುಮಾನಗಳಿವೆ. ತಜ್ಞರ ಪ್ರಕಾರ ಕೆಲವೊಂದು ಔಷಧಿಗಳನ್ನು ಹಾಲುಣಿಸುವ ಸಮಯದಲ್ಲಿ ತೆಗೆದುಕೊಳ್ಳುವುದು ಸುರಕ್ಷಿತ. ಆದರೆ ಸ್ತನ್ಯಪಾನ ಸಮಯದಲ್ಲಿ ಕ್ಯಾನ್ಸರ್ ಔಷಧಿಗಳು ಇತ್ಯಾದಿ ಕೆಲವು ರೀತಿಯ ಔಷಧಿಗಳನ್ನು ಮಾತ್ರ ತೆಗೆದುಕೊಳ್ಳಬಾರದು. ಔಷಧ ಸೇವನೆಗೂ ಮುನ್ನ ವೈದ್ಯರ ಸಲಹೆ ಪಡೆಯುವುದು ಸೂಕ್ತ.