
ಜಮೀನಿನಲ್ಲಿ ಅಳವಡಿಸಲಾಗಿದ್ದ ಮೊಬೈಲ್ ಟವರ್ ಅನ್ನೇ ಖದೀಮರು ಕಳವು ಮಾಡಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.
ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದ ಶಂಕ್ರಪ್ಪ ನಿಂಗಪ್ಪ ಹಾವೇರಿ ಎಂಬವರ ಜಮೀನಿನಲ್ಲಿ 2006 ರಲ್ಲಿ ಜಿಟಿಎಲ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಕಂಪನಿ, ಸುಮಾರು 10.89 ಲಕ್ಷ ರೂಪಾಯಿ ಮೌಲ್ಯದ ಈ ಟವರನ್ನು ಸ್ಥಾಪಿಸಿತ್ತು.
ಕಂಪನಿಯ ವಿಜಿಲೆನ್ಸ್ ಅಧಿಕಾರಿ ಪ್ರತಿ ತಿಂಗಳು ಸ್ಥಳಕ್ಕೆ ಭೇಟಿ ನೀಡಿ ಟವರ್ ಪರಿಶೀಲನೆ ನಡೆಸುತ್ತಿದ್ದು, ಇತ್ತೀಚೆಗೆ ಬಂದು ನೋಡಿದ ಸಂದರ್ಭದಲ್ಲಿ ಟವರ್ ಸಮೇತ ಎಲ್ಲಾ ಸಾಮಗ್ರಿಗಳು ಕಳುವಾಗಿರುವುದು ಬೆಳಕಿಗೆ ಬಂದಿದೆ.
ಇದೀಗ ವಿಜಿಲೆನ್ಸ್ ಅಧಿಕಾರಿ ಶಿವಲಿಂಗ ಅಣ್ಣಪ್ಪ ರಾಜಾಪುರೆ ಎಂಬವರು ಹಾವೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತಂತೆ ಪ್ರಕರಣ ದಾಖಲಿಸಿದ್ದಾರೆ.