ಬೆಂಗಳೂರಿನ ಗಾಂಧಿನಗರದ ಹೃದಯ ಭಾಗದಲ್ಲಿರುವ 2ನೇ ಮುಖ್ಯ ರಸ್ತೆಯಲ್ಲಿ ವಿಚಿತ್ರ ಕಳ್ಳತನವೊಂದು ವರದಿಯಾಗಿದೆ. ಹೋಟೆಲ್ ಹೊರಗೆ ನಿಲುಗಡೆ ಮಾಡಿದ್ದ ಕಾರೊಂದರ ನಾಲ್ಕು ಚಕ್ರಗಳನ್ನು ದುಷ್ಕರ್ಮಿಗಳು ಬಿಚ್ಚಿ, ಹೊತ್ತೊಯ್ದಿದ್ದಾರೆ. ಈ ಘಟನೆ ಭಾನುವಾರ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಾರ್ಚ್ 15ರ ತಡರಾತ್ರಿ ಸುಮಾರು 12 ಗಂಟೆಗೆ ಗಾಂಧಿನಗರದ 2ನೇ ಮುಖ್ಯರಸ್ತೆಯ ವನುಷ ಹೋಟೆಲ್ ಎದುರು ಈ ಕಳ್ಳತನ ನಡೆದಿದೆ. ಹುಬ್ಬಳ್ಳಿ ನವನಗರ ನಿವಾಸಿ ಗೋವಿಂದಪ್ಪ (52) ನೀಡಿದ ದೂರಿನ ಮೇರೆಗೆ ಉಪ್ಪಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗೋವಿಂದಪ್ಪ ಅವರು ಕಾರ್ಯ ನಿಮಿತ್ತ ಸ್ನೇಹಿತರೊಂದಿಗೆ ಮಾರ್ಚ್ 14ರ ರಾತ್ರಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬಸ್‌ನಲ್ಲಿ ಬಂದಿದ್ದರು. ಮರುದಿನ ಬೆಂಗಳೂರಿನಲ್ಲಿ ಕೆಲಸ ಮುಗಿಸಲು ತಮ್ಮ ಸಂಬಂಧಿಕರ ಕಾರನ್ನು ಪಡೆದುಕೊಂಡಿದ್ದರು. ನಗರದಲ್ಲಿ ಸುತ್ತಾಡಿದ ಬಳಿಕ ರಾತ್ರಿ ಗಾಂಧಿನಗರದ 2ನೇ ಮುಖ್ಯರಸ್ತೆಯ ವನುಷ ಹೋಟೆಲ್‌ನಲ್ಲಿ ರೂಮ್ ಬಾಡಿಗೆ ಪಡೆದು ತಂಗಿದ್ದರು. ಈ ವೇಳೆ ಕಾರನ್ನು ಹೋಟೆಲ್ ಎದುರಿನ ರಸ್ತೆ ಬದಿ ನಿಲುಗಡೆ ಮಾಡಿದ್ದರು.
ಮಾರನೇ ದಿನ ಎದ್ದು ನೋಡಿದಾಗ ಕಾರಿನ ನಾಲ್ಕು ಚಕ್ರಗಳನ್ನು ದುಷ್ಕರ್ಮಿಗಳು ಬಿಚ್ಚಿ ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆಶ್ಚರ್ಯಕರ ಸಂಗತಿಯೆಂದರೆ, ಇಡೀ ಘಟನೆಯನ್ನು ಅದೇ ಹೋಟೆಲ್‌ನಲ್ಲಿ ತನ್ನ ಕುಟುಂಬದೊಂದಿಗೆ ತಂಗಿದ್ದ 15 ವರ್ಷದ ಬಾಲಕ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾನೆ. ದುಷ್ಕರ್ಮಿಗಳು ಕಾರಿನ ಟೈರ್ ಬದಲಾಯಿಸುತ್ತಿದ್ದಾರೆಂದು ಭಾವಿಸಿದ್ದ ಬಾಲಕ ಈ ವಿಚಾರವನ್ನು ಯಾರಿಗೂ ಹೇಳಲಿಲ್ಲ.
ಪೊಲೀಸರು ಸ್ಥಳಕ್ಕೆ ಬಂದಾಗ ವಿಚಾರ ತಿಳಿದ ಬಾಲಕ ಪೊಲೀಸರಿಗೆ ವೀಡಿಯೋವನ್ನು ನೀಡಿದ್ದಾನೆ. ಇದಲ್ಲದೆ, ಘಟನೆಯ ವಿಡಿಯೋ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲೂ ಸೆರೆಯಾಗಿದೆ. ದುಷ್ಕರ್ಮಿಗಳು ಇನ್ನೋವಾ ಕಾರಿನಲ್ಲಿ ಬಂದು ಕಾರಿನ ಕೆಳಗೆ ಕಲ್ಲುಗಳನ್ನು ಇಟ್ಟು ನಾಲ್ಕೂ ಚಕ್ರಗಳನ್ನು ತೆಗೆದಿರುವುದು ಕಂಡು ಬಂದಿದೆ.