ಮುಜಾಫರ್‌ಪುರ: ಮುಜಾಫರ್‌ಪುರ: ಬಿಹಾರದ ಬೇಗುಸರಾಯ್ ಜಿಲ್ಲೆಯ ರೈಲ್ವೇ ಯಾರ್ಡ್‌ನಿಂದ ಸಂಪೂರ್ಣ ಡೀಸೆಲ್ ಎಂಜಿನ್ ಕಳವು ಮಾಡಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಕಳ್ಳರು ರೈಲ್ವೇ ಯಾರ್ಡ್ ಗೆ ಸುರಂಗ ಕೊರೆದು ಇಂಜಿನ್ ಬಿಡಿಭಾಗಗಳನ್ನು ಕದಿಯಲು ಪ್ರಾರಂಭಿಸಿದ್ದಾರೆ, ರಿಪೇರಿಗಾಗಿ ಅಲ್ಲಿಗೆ ತಂದಿದ್ದ ಇಂಜಿನ್ ಸಂಪೂರ್ಣ ಭಾಗಗಳನ್ನು ಬಿಚ್ಚಿಕೊಂಡು ಸಾಗಿಸಿದ್ದಾರೆ. ಕಳ್ಳರು ಸುರಂಗ ನಿರ್ಮಿಸಿ 30 ಕೋಟಿ ರೂ. ಮೌಲ್ಯದ ಇಂಜಿನ್ ಭಾಗಗಳನ್ನು ಕದ್ದಿದ್ದಾರೆ. ವಿಷಯ ಬಯಲಿಗೆ ಬಂದ ನಂತರ ರೈಲ್ವೆ ವಲಯದಲ್ಲಿ ಸಂಚಲನ ಮೂಡಿಸಿದೆ.
ಕಳೆದ ವಾರ ಗರಹರ ಯಾರ್ಡ್ ಗೆ ರಿಪೇರಿಗೆ ತಂದಿದ್ದ ಡೀಸೆಲ್ ಇಂಜಿನ್ ಕಳ್ಳತನವಾಗಿರುವ ಬಗ್ಗೆ ಬರೌನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯ ಸಂದರ್ಭದಲ್ಲಿ ಮೂವರನ್ನು ಬಂಧಿಸಲಾಗಿದೆ ಎಂದು ಮುಜಾಫರ್‌ಪುರದ ರೈಲ್ವೆ ರಕ್ಷಣಾ ಪಡೆ(ಆರ್‌ಪಿಎಫ್) ಇನ್ಸ್ ಪೆಕ್ಟರ್ ಪಿಎಸ್ ದುಬೆ ಹೇಳಿದ್ದಾರೆ.
ಮುಜಾಫರ್ ಪುರ ಜಿಲ್ಲೆಯ ಪ್ರಭಾತ್ ನಗರ ಪ್ರದೇಶದ ಸ್ಕ್ರ್ಯಾಪ್ ಗೋಡೌನ್‌ನಲ್ಲಿ ಶೋಧ ನಡೆಸಲಾಗಿದ್ದು, 13 ಗೋಣಿ ಚೀಲಗಳಲ್ಲಿ ರೈಲಿನ ಬಿಡಿಭಾಗಗಳು ಪತ್ತೆಯಾಗಿವೆ. ಸ್ಕ್ರ್ಯಾಪ್ ಗೋಡೌನ್ ಮಾಲೀಕರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಹೇಳಿದರು.
ವಶಪಡಿಸಿಕೊಂಡ ವಸ್ತುಗಳಲ್ಲಿ ಎಂಜಿನ್ ಭಾಗಗಳು, ವಿಂಟೇಜ್ ರೈಲು ಎಂಜಿನ್ ಗಳ ಚಕ್ರಗಳು ಮತ್ತು ಭಾರವಾದ ಕಬ್ಬಿಣದಿಂದ ಮಾಡಿದ ರೈಲ್ವೆ ಭಾಗಗಳು ಸೇರಿವೆ. ಕಳ್ಳರು ರೈಲ್ವೇ ಯಾರ್ಡ್‌ಗೆ ಸುರಂಗ ತೋಡಿದ್ದರು. ಅದರ ಮೂಲಕ ಅವರು ಲೊಕೊಮೊಟಿವ್ ಭಾಗಗಳು ಮತ್ತು ಇತರ ವಸ್ತುಗಳನ್ನು ಚೀಲಗಳಲ್ಲಿ ಸಾಗಿಸುತ್ತಿದ್ದರು.
ಈ ಗ್ಯಾಂಗ್ ಸ್ಟೀಲ್ ಬ್ರಿಡ್ಜ್ ಗಳನ್ನು ಬಿಚ್ಚುವಲ್ಲಿ ಮತ್ತು ಅವುಗಳ ಭಾಗಗಳನ್ನು ಕದಿಯುವಲ್ಲಿಯೂ ತೊಡಗಿಸಿಕೊಂಡಿದೆ.