ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನದ ಮಧ್ಯೆ ವಂಚನೆ ಪ್ರಕರಣಗಳು ಹೆಚ್ಚಾಗ್ತಿವೆ. ಆನ್ಲೈನ್ ಮೂಲಕ ಜನರನ್ನು ಮೋಸಗೊಳಿಸುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಈ ಮಧ್ಯೆ ಅಂಚೆ ಕಚೇರಿ ಮೂಲಕ ಜನರನ್ನು ವಂಚಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಉತ್ತರಪ್ರದೇಶದ ಕಾಸ್ಗಂಜ್ ನಲ್ಲಿ ವಾಸಿಸುತ್ತಿರುವ ಅರ್ಚನಾ, ಮನೆಗೆ ಬಂದ ಪಾರ್ಸಲ್ ನಂಬಿ ಮೋಸಕ್ಕೊಳಗಾಗಿದ್ದಾರೆ. ಅಂಚೆ ಕಚೇರಿ ಮೂಲಕ ಒಂದು ಲಕೋಟೆ ಮನೆಗೆ ಬಂದಿದೆ. ಅದ್ರಲ್ಲಿ ಕಾಗದ ಮತ್ತು ಸ್ಕ್ರಾಚ್ ಕೂಪನ್ ಬಂದಿದೆ. ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್ ಮತ್ತು ಸ್ವಚ್ಛ ಭಾರತ್ ಅಭಿಯಾನದ ಲೋಗೋವನ್ನು ಇದು ಹೊಂದಿತ್ತಂತೆ. ಕೂಪನ್ ಸ್ಕ್ರಾಚ್ ಮಾಡುವಂತೆ ಹೇಳಲಾಗಿದೆ. ಕೂಪನ್ ಗೀಚಿದಾಗ 11 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ ಎಂದು ಬರೆದಿತ್ತಂತೆ.
ಎರಡನೇ ಕಾಗದದಲ್ಲಿ ಕೆಲ ನಿಯಮಗಳಿತ್ತಂತೆ. ಅದರ ಪ್ರಕಾರ, ಬಹುಮಾನ ವಿಜೇತರು ಮೊದಲು ಕೆಲವು ರೂಪಾಯಿಗಳನ್ನು ಜಮಾ ಮಾಡಬೇಕು. ಸ್ಕ್ರಾಚ್ ಕಾರ್ಡ್ ಬರ್ತಿದ್ದಂತೆ ಅರ್ಚನಾಗೆ ಕರೆ ಬಂದಿದೆ. ಬಹುಮಾನ ಪಡೆಯಲು ಹಣ ನೀಡುವಂತೆ ಕೇಳಲಾಗಿತ್ತಂತೆ. ಯುಪಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಅರ್ಚನಾ, ಮೋಸ ಅರ್ಥ ಮಾಡಿಕೊಂಡು ಯಾವುದೇ ಹಣ ಪಾವತಿ ಮಾಡಲಿಲ್ಲವಂತೆ. ಇದ್ರ ಬಗ್ಗೆ ವಿಚಾರಣೆ ನಡೆಸಿದಾಗ, ಫ್ಲಿಪ್ಕಾರ್ಟ್ ಯಾವುದೇ ಕೂಪನ್ ಕಳಿಸಿಲ್ಲ ಎಂಬುದು ಸ್ಪಷ್ಟವಾಗಿದೆ. ಆನ್ಲೈನ್ ಅಲ್ಲದೆ ಕೋರಿಯರ್ ಕಳುಹಿಸಿ ಜನರನ್ನು ವಂಚಿಸುವವರು ಹೆಚ್ಚಾಗ್ತಿದ್ದು, ಇದ್ರ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.