
ರೈಲ್ವೇ ಟಿಕೆಟ್ ಪರೀಕ್ಷಕರ (ಟಿಟಿಇ) ಕೈಬ್ಯಾಗ್ ಕದ್ದ ಕಳ್ಳನೊಬ್ಬ, ಅದರಲ್ಲಿದ್ದ ಸಮವಸ್ತ್ರ ಹಾಗೂ ಚಲನ್ ಪುಸ್ತಕ ಬಳಸಿಕೊಂಡು ಪ್ರಯಾಣಿಕರ ಟಿಕೆಟ್ ಪರಿಶೀಲನೆ ನಡೆಸಿ ಅವರಿಂದ ದಂಡದ ಹೆಸರಿನಲ್ಲಿ ದುಡ್ಡು ಕಿತ್ತ ಘಟನೆ ಹೌರಾ-ಅಮೃತಸರ ಮೇಲ್ ರೈಲೊಂದರಲ್ಲಿ ಜರುಗಿದೆ.
ಬರೇಲಿ ನಿಲ್ದಾಣದಲ್ಲಿ ಟಿಟಿಇ ಕೈಬ್ಯಾಗ್ ಕದ್ದ ಗೋವಿಂದ್ ಸಿಂಗ್ ಎಂಬ ಈತನ ಈ ಆಟ ಹೆಚ್ಚು ಕಾಲ ನಡೆಯಲಿಲ್ಲ. ಬ್ಯಾಗಿನ ಮಾಲೀಕರಾದ ಜಸ್ವಂತ್ ಸಿಂಗ್ ಪೊಲೀಸರಿಗೆ ದೂರು ಕೊಟ್ಟ ಸ್ವಲ್ಪ ಹೊತ್ತಿನಲ್ಲೇ ಕಳ್ಳನನ್ನು ಹಿಡಿಯಲಾಗಿದೆ.
ಉತ್ತರ ಪ್ರದೇಶದ ಶಹಜಾನ್ಪುರದ ಗೋವಿಂದ್‌ನನ್ನು ಬಿಜ್ನೋರ್ ಬಳಿಕ ನಜೀಬಾಬಾದ್ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಗೋವಿಂದನ ಕೈಯಿಂದ ಚಲನ್ ಪುಸ್ತಕ ಹಾಗೂ ಬ್ಯಾಗಿನಲ್ಲಿದ್ದ ಇತರೆ ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗೋವಿಂದನ ವಿರುದ್ಧ ಐಪಿಸಿಯ 420ನೇ ವಿಧಿ (ವಂಚನೆ), 170 (ನಾಗರಿಕ ಸೇವಕರ ವೇಷ ಹಾಕುವುದು), 380 (ಕಳ್ಳತನ) ವಿಧಿಗಳಡಿ ಆರೋಪ ಪಟ್ಟಿ ಸಲ್ಲಿಸಲಾಗಿದೆ.