ರಾಯ್‌ಗಢ್ ಜಿಲ್ಲೆಯ ನೇರಲ್‌ನಲ್ಲಿ ಕಳ್ಳನೊಬ್ಬ ಸುದ್ದಿ ಮಾಡಿದ್ದಾನೆ. ಮರಾಠಿ ಕವಿ ಹಾಗೂ ಸಾಮಾಜಿಕ ಹೋರಾಟಗಾರರ ಮನೆಯಲ್ಲಿ ಕಳ್ಳತನ ಮಾಡಿದ್ದ ಕಳ್ಳನಿಗೆ ಕೊನೆಯಲ್ಲಿ ಪಶ್ಚಾತಾಪವಾಗಿದೆ. ಹಾಗಾಗಿ ಕಳ್ಳತನ ಮಾಡಿದ್ದ ವಸ್ತುವನ್ನು ವಾಪಸ್ ಮಾಡಿದ್ದಲ್ಲದೆ ಗೋಡೆಯ ಮೇಲೆ ಕ್ಷಮೆಯ ನೋಟ್ ಬರೆದಿದ್ದಾನೆ.
ಪ್ರಸಿದ್ಧ ಮರಾಠಿ ಕವಿ ಮತ್ತು ಸಾಮಾಜಿಕ ಕಾರ್ಯಕರ್ತರಾಗಿದ್ದ ನಾರಾಯಣ್ ಸುರ್ವೆ ಮನೆಯಲ್ಲಿ ಕಳ್ಳತನ ನಡೆದಿತ್ತು. ಸುರ್ವೆ ಅವರು ಆಗಸ್ಟ್ 16, 2010 ರಂದು ತಮ್ಮ 84 ನೇ ವಯಸ್ಸಿನಲ್ಲಿ ನಿಧನರಾದರು. ಈ ಮನೆಯಲ್ಲಿ ಈಗ ಸುರ್ವೆ ಅವರ ಮಗಳು ಸುಜಾತಾ ಮತ್ತು ಅವರ ಪತಿ ಗಣೇಶ ಘಾರೆ ವಾಸವಾಗಿದ್ದಾರೆ. ಅವರು ತಮ್ಮ ಮಗನ ಮನೆಗೆ ಹೋಗಿದ್ದರು. ಹತ್ತು ದಿನ ಮನೆಯಲ್ಲಿ ಇರದ ಕಾರಣ ಕಳ್ಳ ಕೈಚಳಕ ತೋರಿಸಿದ್ದ.
ಎಲ್ ಇ ಡಿ ಟಿವಿ ಸೇರಿದಂತೆ ಕೆಲ ವಸ್ತುಗಳನ್ನು ಕದ್ದೊಯ್ದಿದ್ದ. ಮರುದಿನ ಕಳ್ಳತನದ ವಸ್ತುಗಳನ್ನು ಪರಿಶೀಲಿಸುವಾಗ ಸುರ್ವೆ ಅವರ ಫೋಟೋ ಮತ್ತು ನೆನಪಿನ ವಸ್ತುಗಳು ಕಾಣಿಸಿವೆ. ಈ ಮನೆ ನಾರಾಯಣ ಸುರ್ವೆ ಅವರದ್ದು ಎಂಬುದು ತಿಳಿಯುತ್ತಿದ್ದಂತೆ ಕಳ್ಳತನ ಮಾಡಿದ್ದ ಎಲ್ಲ ವಸ್ತುಗಳನ್ನು ಮನೆಯಲ್ಲಿಟ್ಟು, ಗೋಡೆ ಮೇಲೆ ಟಿಪ್ಪಣಿ ಬರೆದು ಕ್ಷಮೆ ಕೇಳಿದ್ದಾನೆ.
ಸುಜಾತಾ ಮನೆಗೆ ವಾಪಸ್ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಅವರು ಪೊಲೀಸರಿಗೆ ದೂರು ನೀಡಿದ್ದು, ಬೆರಳಚ್ಚುಗಳ ಆಧಾರದ ಮೇಲೆ ಪೊಲೀಸರು ತನಿಖೆ ಶುರು ಮಾಡಿದ್ದಾರೆ.