ಉತ್ತರಪ್ರದೇಶದ ಸಮಾಜವಾದಿ ಪಕ್ಷ ಅಪರಾಧಿಗಳಿಗೆ ಟಿಕೆಟ್ ನೀಡುತ್ತಿದೆ ಎಂದು ಅಮಿತ್ ಶಾ ಹಾಗೂ ಯೋಗಿ ಆದಿತ್ಯನಾತ್ ಟೀಕೆ ಮಾಡಿದ್ದರು. ಇದಕ್ಕೆ ಉತ್ತರ ನೀಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಬಿಜೆಪಿ ಇದುವರೆಗೆ 99 ಅಪರಾಧದ ಇತಿಹಾಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಎಂದು ಆರೋಪಿಸಿದ್ದಾರೆ.
ಹೌದು, ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಕಾವು ಜೋರಾಗುತ್ತಿದ್ದಂತೆ, ರೇಸ್ ನಲ್ಲಿ ಮುಂದೆ ಇರುವ ಎರಡು ಪಕ್ಷಗಳ ಗುದ್ದಾಟ ಹೆಚ್ಚುತ್ತಿದೆ. ಬಿಜೆಪಿಯ ಟೀಕೆಗೆ ಟ್ವೀಟ್ ಮೂಲಕ ಉತ್ತರ ನೀಡಿರುವ ಅಖಿಲೇಶ್, ಬಿಜೆಪಿಯ ಕ್ರಿಮಿನಲ್ ಇಮೇಜ್ ಹೊಂದಿರುವ ಅಭ್ಯರ್ಥಿಗಳ ಶತಕ ಪೂರೈಸುವಲ್ಲಿ ಒಬ್ಬರ ಕೊರತೆಯಿದೆ. ಇದುವರೆಗೆ ಕ್ರಿಮಿನಲ್ ಇಮೇಜ್ ಹೊಂದಿರುವ 99 ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ ಎಂದಿದ್ದಾರೆ.
ಈ ಹಿಂದೆ, ಅಖಿಲೇಶ್ ಯಾದವ್ ಮತ್ತು ಅವರ ಪಕ್ಷವು ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳನ್ನು ಪೋಷಿಸುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು. ಇತ್ತೀಚೆಗಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯ ಪ್ರವಾಸದ ವೇಳೆ ಎಸ್‌ಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಕ್ರಿಮಿನಲ್‌ಗಳ ಆಳ್ವಿಕೆ ನಡೆಯಲಿದೆ ಎಂದು ಹೇಳಿದ್ದರು.