ಕೇಂದ್ರ ಸರ್ಕಾರ ಎಲ್.ಪಿ.ಜಿ. ಮತ್ತು ಇಂಧನ ಬೆಲೆಗಳನ್ನು ತಕ್ಷಣವೇ ಕಡಿಮೆ ಮಾಡಬೇಕು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಒತ್ತಾಯಿಸಿದ್ದಾರೆ.
ಕೇಂದ್ರವು ನೈಜ ಸಮಸ್ಯೆಗಳನ್ನು ಪರಿಗಣಿಸದೇ ರಾಜ್ಯಗಳ ಮೇಲೆ ಆರೋಪ ಹೊರಿಸುತ್ತದೆ ಎಂದು ಅವರು ಟೀಕಿಸಿದ್ದಾರೆ.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಜನರಿಗೆ ಪರಿಹಾರ ನೀಡುವ ಸಲುವಾಗಿ ಇಂಧನದ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು(ವ್ಯಾಟ್) ಕಡಿಮೆ ಮಾಡದಿರುವ ಪ್ರತಿಪಕ್ಷಗಳ ಆಡಳಿತದ ರಾಜ್ಯಗಳನ್ನು ತರಾಟೆಗೆ ತೆಗೆದುಕೊಂಡ ನಂತರ ಪಶ್ಚಿಮ ಬಂಗಾಳ ಸಿಎಂ ಈ ಹೇಳಿಕೆ ನೀಡಿದ್ದಾರೆ.
ಕೇಂದ್ರದಿಂದ ಪಾವತಿಯಾಗದ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಬಾಕಿಗಳ ಸಮಸ್ಯೆ ಬಗ್ಗೆ ಮಮತಾ ಬ್ಯಾನರ್ಜಿ ದೆಹಲಿ ಭೇಟಿ ವೇಳೆ ಕೇಂದ್ರ ಸಚಿವರೊಂದಿಗೆ ಚರ್ಚಿಸಲಿದ್ದಾರೆ.
ಶನಿವಾರ ನಡೆಯಲಿರುವ ಮುಖ್ಯ ನ್ಯಾಯಮೂರ್ತಿಗಳು, ಮುಖ್ಯಮಂತ್ರಿಗಳ ಸಮಾವೇಶದಲ್ಲಿ ಪಾಲ್ಗೊಳ್ಳಲು ಮಮತಾ ಬ್ಯಾನರ್ಜಿ ದೆಹಲಿಗೆ ತಲುಪಲಿದ್ದಾರೆ. ಸಮಯದ ಕೊರತೆಯಿಂದಾಗಿ ಈ ಬಾರಿ ಪ್ರಧಾನಿಯವರೊಂದಿಗೆ ಪ್ರತ್ಯೇಕ ಸಭೆ ನಡೆಯುತ್ತಿಲ್ಲ ಎಂದು ಅವರು ಹೇಳಿದ್ದಾರೆ.