ಲಕ್ನೋ: ಶಾಲೆಗಳು ಮತ್ತು ಕಾಲೇಜುಗಳು ಸೇರಿದಂತೆ ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಜ್ಞಾನವನ್ನು ನೀಡುವುದರ ಜೊತೆಗೆ, ಬದುಕಿಗೆ ದಾರಿ ತೋರುವುದರ ಜೊತೆ, ಉತ್ತಮ ಸ್ನೇಹಿತರನ್ನು ನೀಡುವ ಪವಿತ್ರ ಸ್ಥಳ. ಇಲ್ಲಿ ಆಟ, ಪಾಠದ ಜೊತೆಗೆ ತಮಾಷೆ, ಗೇಲಿ, ತರ್ಲೆ ಸಾಮಾನ್ಯ. ಇನ್ನು ಹುಡುಗರು, ಹುಡುಗಿಯರು ಒಟ್ಟಿಗೆ ಓದುವ ಸ್ಥಳವಾದರೆ ಅಲ್ಲಿ ತುಸು ಹೆಚ್ಚೆ ತಮಾಷೆಗಳು ಇರುತ್ತದೆ. ಇದು ಕೆಲವೊಮ್ಮೆ ಪ್ರಿನ್ಸಿಪಾಲ್, ಮುಖ್ಯೋಪಾಧ್ಯಾಯರ ತನಕವೂ ಹೋಗುವುದುಂಟು.
ಇದೀಗ ಉತ್ತರ ಪ್ರದೇಶದ ಔರೈಯಾದಲ್ಲಿನ ಜವಾಹರ್ ನವೋದಯ ವಿದ್ಯಾಲಯದ ಏಳನೇ ತರಗತಿಯ ಸೆಕ್ಷನ್ ಎ ವಿದ್ಯಾರ್ಥಿಗಳ ದೂರಿನ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೌದು, ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ತಮ್ಮ ಹೆಸರನ್ನು ಹೇಳಿ ಗೇಲಿ ಮಾಡುತ್ತಾರೆ ಎಂದು ದೂರಿದ್ದು, ದಯವಿಟ್ಟು ವಿದ್ಯಾರ್ಥಿನಿಯರು ಕ್ಷಮೆ ಕೇಳುವಂತೆ ಮಾಡಬೇಕು ಎಂದು ದೂರಿನ ಪತ್ರದಲ್ಲಿ ಪ್ರಾಂಶುಪಾಲರ ಬಳಿ ಮನವಿ ಮಾಡಿಕೊಂಡಿದ್ದಾರೆ.
ಎಂ.ಬಿ. ಪಾಟೀಲ್ ಕಟ್ಟಾ ಕಾಂಗ್ರೆಸ್ಸಿಗ: ಡಿಕೆಶಿ ಹೇಳಿಕೆಗೆ ರಮ್ಯಾ ಟಾಂಗ್
ವಿದ್ಯಾರ್ಥಿನಿಯರು, ವಿದ್ಯಾರ್ಥಿಗಳಿಗೆ ಡಮಾರ್, ರಸಗುಲ್ಲಾ ಎಂಬ ಆಕ್ಷೇಪಾರ್ಹ ಹೆಸರುಗಳಿಂದ ಗೇಲಿ ಮಾಡುತ್ತಾರೆ. ತರಗತಿಯಲ್ಲಿ ಸಾಕಷ್ಟು ಗಲಾಟೆ ಮಾಡುತ್ತಾರೆ. ಇದರಿಂದ ನಮಗೆ ಓದಿಕೊಳ್ಳುವುದಕ್ಕೆ ಅಡ್ಡಿಯಾಗುತ್ತಿದೆ. ತರಗತಿಯಲ್ಲಿ ಹಾಡು ಹಾಡುವುದರಿಂದ, ಮಾತನಾಡುವುದರಿಂದ ತುಂಬಾ ತೊಂದರೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ. ಪತ್ರವು ಹುಡುಗಿಯರ ಹೆಸರನ್ನು ಉಲ್ಲೇಖಿಸುವ ಮೂಲಕ ಕೊನೆಗೊಳ್ಳುತ್ತದೆ.
ಸಾಮಾಜಿಕ ಜಾಲತಾಣದಲ್ಲಿ ಈ ಪತ್ರ ವೈರಲ್ ಆಗುತ್ತಿದ್ದಂತೆ ಸ್ಪಷ್ಟನೆ ನೀಡಿದ ಪ್ರಾಂಶುಪಾಲರು, ಇದು ಎರಡು ತಿಂಗಳ ಹಳೆಯ ಪತ್ರ, ಇದೀಗ ಬೆಳಕಿಗೆ ಬಂದಿದೆ. ಈ ಕುರಿತು ಸಿಬ್ಬಂದಿಯೊಂದಿಗೆ ಚರ್ಚಿಸಲಾಯಿತು. ಬಳಿಕ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರೊಟ್ಟಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲಾಯಿತು ಎಂದು ಹೇಳಿದ್ದಾರೆ.