ಭಿವಾಂಡಿ: ತಾಜ್‌ಮಹಲ್ ಅಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಡಿಗ್ರಿ ಇರಬೇಕು. ಅದಕ್ಕಾಗಿ ಅವರೆಲ್ಲ ಹುಡುಕಾಟ ನಡೆಸಿದ್ದಾರೆ ಎಂದು ಸಂಸದ ಅಸಾದುದ್ದೀನ್ ಓವೈಸಿ ಶನಿವಾರ ಮಹಾರಾಷ್ಟ್ರದ ಭಿವಾಂಡಿಯಲ್ಲಿ ವ್ಯಂಗ್ಯವಾಡಿದ್ದಾರೆ. ಇತ್ತೀಚೆಗೆ ಶುರುವಾದ ತಾಜ್ ಮಹಲ್ ವಿವಾದದ ಹಿನ್ನೆಲೆಯಲ್ಲಿ ಅವರು ಈ ವಾಗ್ದಾಳಿ ನಡೆಸಿದ್ದಾರೆ.
ಆಗ್ರಾದ ತಾಜ್‌ಮಹಲ್‌ನಲ್ಲಿರುವ 22 ಬೀಗ ಹಾಕಿದ ಕೋಣೆಗಳಲ್ಲಿರುವ “ಸತ್ಯವನ್ನು ಕಂಡುಹಿಡಿಯಿರಿ” ಎಂದು ಬಿಜೆಪಿ ನಾಯಕರೊಬ್ಬರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ತಾಜ್‌ಮಹಲ್ ವಾಸ್ತವವಾಗಿ ಹಳೆಯ ಶಿವ ದೇವಾಲಯ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಅಲಹಾಬಾದ್ ಹೈಕೋರ್ಟ್ ಇಂತಹ ಅರ್ಜಿಯನ್ನು ಮೇ 12 ರಂದು ವಜಾಗೊಳಿಸಿತ್ತು ಮತ್ತು ಅಂತಹ ವಿಷಯಗಳನ್ನು “ಇತಿಹಾಸಕಾರರಿಗೆ ಬಿಡಬೇಕು” ಎಂದು ಹೇಳಿತ್ತು.
ಭಾರತವು ದ್ರಾವಿಡರು, ಆದಿವಾಸಿಗಳಿಗೆ ಸೇರಿದೆ. ಅವರು ಮಾತ್ರವೇ ಭಾರತದ ಮೂಲ ನಿವಾಸಿಗಳು. ಮೊಘಲರು ಭಾರತದ ಹೊರಗಿನಿಂದ ಹೇಗೆ ಬಂದರು ಎಂಬುದರ ಕುರಿತು ಬಿಜೆಪಿ ಮಾತನಾಡುತ್ತಲೇ ಇದೆ. ಆದರೆ ಪ್ರಪಂಚದ ವಿವಿಧ ಭಾಗಗಳಿಂದ ಹಲವಾರು ಇತರ ಸಮುದಾಯಗಳು ಕೂಡ ಭಾರತಕ್ಕೆ ಬಂದಿವೆ ಎಂದು ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೇಹಾದುಲ್ ಮುಸ್ಲಿಮೀನ್ (ಎಐಎಂಇಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರತಿಪಾದಿಸಿದರು.
“ಭಾರತ ನನ್ನದಲ್ಲ, ಠಾಕ್ರೆಯವರದ್ದಲ್ಲ, ಮೋದಿ-ಷಾ ಅವರದ್ದಲ್ಲ. ಭಾರತ ಯಾರದ್ದಾದರೂ ಇದ್ದರೆ ಅದು ದ್ರಾವಿಡರು ಮತ್ತು ಆದಿವಾಸಿಗಳು. ಬಿಜೆಪಿ- ಆರ್‌ಎಸ್‌ಎಸ್‌ನವರು ಏನಿದ್ದರೂ ಮೊಘಲರ ನಂತರದವರು ಮಾತ್ರ. ಆದರೆ ವಾಸ್ತವವಾಗಿ, ಆಫ್ರಿಕಾ, ಇರಾನ್, ಮಧ್ಯ ಏಷ್ಯಾದಿಂದ ಜನರು ವಲಸೆ ಬಂದ ನಂತರವಷ್ಟೇ ಭಾರತ ರೂಪುಗೊಂಡಿತು ಎಂದು ಓವೈಸಿ ಹೇಳಿದರು.
ಪ್ರಸ್ತುತ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರದಲ್ಲಿರುವ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ)ದ ವಿರುದ್ಧವೂ ಓವೈಸಿ ವಾಗ್ದಾಳಿ ನಡೆಸಿದರು. ‘ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆಯನ್ನು ನಿಲ್ಲಿಸಲು ಎನ್‌ಸಿಪಿ ನಾಯಕರು ಮತ ಕೇಳುತ್ತಿದ್ದರು. ಚುನಾವಣೆಯ ನಂತರ ಎನ್‌ಸಿಪಿ ಶಿವಸೇನೆಯೊಂದಿಗೆ ಮದುವೆಯಾಯಿತು. ಮೂರು ಪಕ್ಷಗಳ ಪೈಕಿ ವಧು ಯಾರು ಎಂದು ನನಗೆ ತಿಳಿದಿಲ್ಲ” ಎಂದು ಓವೈಸಿ ಲೇವಡಿ ಮಾಡಿದರು.