ಚಳಿಗಾಲ ಬಂತೆಂದರೆ ನೆಗಡಿ, ಕೆಮ್ಮು, ಜ್ವರ ಇವೆಲ್ಲ ಸಾಮಾನ್ಯ. ಗಂಟಲಲ್ಲಿ ತುರಿಕೆ, ನೋವಿನ ಜೊತೆಗೆ ಧ್ವನಿಯೂ ಬದಲಾಗುತ್ತದೆ. ಈ ಋತುವಿನಲ್ಲಿ ಸೋಂಕಿನ ಅಪಾಯ ಹೆಚ್ಚಾಗಿರುವುದರಿಂದ ನಾವು ಜಾಗರೂಕರಾಗಿರಬೇಕು. ಗಂಟಲು ನೋವಿದ್ದರೆ ಭಯಪಡುವ ಅಗತ್ಯವಿಲ್ಲ. ಕೆಲವು ಸುಲಭವಾದ ಮನೆಮದ್ದುಗಳ ಮೂಲಕ ಇದರಿಂದ ಮುಕ್ತಿ ಪಡೆಯಬಹುದು.
ಶುಂಠಿ: ನಾವು ಶುಂಠಿಯನ್ನು ಮಸಾಲೆಯಾಗಿ ಬಳಸುತ್ತೇವೆ. ಇದು ಅನೇಕ ಭಕ್ಷ್ಯಗಳ ರುಚಿಯನ್ನು ಹೆಚ್ಚಿಸುತ್ತದೆ. ದೇಹದಲ್ಲಿ ಉಷ್ಣವನ್ನು ಉಂಟು ಮಾಡಲು ಶುಂಠಿ ಸಹಕಾರಿ. ಹಾಗಾಗಿ ಚಳಿಗಾಲದಲ್ಲಿ ಶುಂಠಿ ಸೇವನೆ ಸೂಕ್ತ. ಗಂಟಲು ನೋವಿದ್ದಾಗ ಶುಂಠಿ, ಕಾಳುಮೆಣಸನ್ನು ಜಜ್ಜಿ ಪುಡಿಮಾಡಿಕೊಂಡು ಅದಕ್ಕೆ ಜೇನುತುಪ್ಪವನ್ನು ಬೆರೆಸಿ ಈ ಮಿಶ್ರಣವನ್ನು ಸೇವಿಸಿ. ಇದು ಗಂಟಲಿನಲ್ಲಿ ಉಷ್ಣತೆಯನ್ನು ಹರಡುತ್ತದೆ ಮತ್ತು ಸೋಂಕುಗಳಿಂದ ಪರಿಹಾರ ನೀಡುತ್ತದೆ. ಶುಂಠಿ ಕೆಮ್ಮಿಗೆ ಕೂಡ ರಾಮಬಾಣವೆಂದು ಪರಿಗಣಿಸಲಾಗುತ್ತದೆ.
ಜೇಷ್ಠಮಧು: ಗಂಟಲು ನೋವಿಗೆ ಜೇಷ್ಠಮಧು ಕೂಡ ಉತ್ತಮ ಔಷಧ. ಗಂಟಲು ನೋವಿದ್ದಾಗ ಜೇಷ್ಠಮಧುವಿನ ತುಂಡನ್ನು ಬಾಯಲ್ಲಿಟ್ಟುಕೊಂಡು ಅಗಿದು ರಸ ನುಂಗಬಹುದು. ಅಥವಾ ಅದನ್ನು ಜಜ್ಜಿ ಪುಡಿ ಮಾಡಿಕೊಳ್ಳಿ. ಅದನ್ನು ನೀರಿನಲ್ಲಿ ಕುದಿಸಿ ಕಷಾಯದಂತೆಯೂ ಕುಡಿಯಬಹುದು. ಜೇಷ್ಠಮಧುವಿನ ಪುಡಿಗೆ ಸ್ವಲ್ಪ ಜೇನುತುಪ್ಪ ಬೆರೆಸಿಕೊಂಡು ನೆಕ್ಕಬಹುದು. ಈ ರೀತಿ ಮಾಡುವುದರಿಂದ ಗಂಟಲು ನೋವು ಕಡಿಮೆಯಾಗುತ್ತದೆ.
ಗಂಟಲು ನೋವಿದ್ದಾಗ ನೀವು ಕೆಲವೊಂದು ಆಹಾರವನ್ನು ಸೇವಿಸಬಾರದು. ಎಣ್ಣೆಯುಕ್ತ ಅಥವಾ ಕರಿದ ಆಹಾರವನ್ನು ಸೇವಿಸಿದರೆ, ಅದು ಗಂಟಲಿನ ನೋವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಆದ್ದರಿಂದ ಪಕೋಡ, ಪೂರಿ, ಸಮೋಸ, ಫ್ರೆಂಚ್ ಫ್ರೈ, ಆಲೂ ಟಿಕ್ಕಿಗಳನ್ನು ತಿನ್ನಬೇಡಿ. ಅಷ್ಟೇ ಅಲ್ಲ ಗಂಟಲು ನೋವಿದ್ದಾಗ ಮೊಸರು ಸೇವನೆ ಮಾಡಬಾರದು. ಏಕೆಂದರೆ ಅದರ ಪರಿಣಾಮವು ತಂಪಾಗಿರುತ್ತದೆ.